ಕಿಕ್ಕೇರಿ ಹೋಬಳಿಯ ಚಿಕ್ಕಳಲೆ ಗ್ರಾಮದ ಕಲ್ಯಾಣಿಯ ಬಳಿ ಪುರಾತನ ಕಾಲದ ನಾಗಲಿಂಗವೊಂದು ಪತ್ತೆಯಾಗಿದೆ. ಕಲಬುರ್ಗಿ ಜಿಲ್ಲೆಯ ಸನ್ನತಿ ಗ್ರಾಮ ಹೊರತು ಪಡಿಸಿದರೆ ಇದುವರೆಗೂ ಈ ರೀತಿಯ ನಾಗಲಿಂಗ ಶಿಲ್ಪ ಎಲ್ಲಿಯೂ ಸಿಕ್ಕಿಲ್ಲ ಎಂದು ಹವ್ಯಾಸಿ ಪ್ರಾಚ್ಯಶಾಸ್ತ್ರ ಸಂಶೋಧಕ ಸಂತೆಬಾಚೆಹಳ್ಳಿ ಮಂಜುನಾಥ್ ತಿಳಿಸಿದ್ದಾರೆ.
ನಿತ್ಯ ಕೊಳದ ಬಳಿ ಓಡಾಡುತ್ತಿದ್ದ ಜನರ ಅವಗಣನೆಗೆ ತುತ್ತಾಗಿ ಬಿದ್ದಿದ್ದ ಕಲ್ಲು ಇಂದು ಏಕಾಏಕಿ ಪ್ರಸಿದ್ದಿ ಪಡೆದುಕೊಂಡಿದೆ. ಗ್ರಾಮದ ಹೊರವಲಯದಲ್ಲಿರುವ ಚಿಕ್ಕಳಮ್ಮ ದೇಗುಲದ ವೀಕ್ಷಣೆಗೆ ಶಿಕ್ಷಕರು ಬಂದಿದ್ದಾಗ, ಸುತ್ತಮುತ್ತಲಿನ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿದಾಗ ಈ ವಿಗ್ರಹ ಪತ್ತೆಯಾಗಿತ್ತು.
ಸುಮಾರು ಐದೂವರೆ ಅಡಿ ಎತ್ತರವಿರುವ ಶಿವಲಿಂಗದ ಮೇಲೆ ಐದು ಎಡೆಯ ಸರ್ಪ ಹೆಡೆ ಬಿಚ್ಚಿರುವಂತೆ ಶಿಲ್ಪವನ್ನು ರಚಿಸಲಾಗಿದೆ. ವಿಗ್ರಹದ ಬಳಿ ಕಲ್ಲುಕಂಬಗಳಿರುವುದು ಸ್ಥಳದಲ್ಲಿ ಪುರಾತನ ಕಾಲದ ದೇವಾಲಯ ಇದ್ದಿರಬಹುದೆಂಬ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.