ಮೈಸೂರು: ತವರು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ಕೊನೆಗೂ ಮುಡಾ ಹಗರಣ ಸಂಬಂಧ ಎಫ್‌ಐಆರ್ ದಾಖಲಾಗಿದೆ. ಇದೀಗ ಸಿಎಂಗೆ ನಿಜವಾದ ಮುಡಾ ಸಂಕಷ್ಟ ಎದುರಾಗಿದ್ದು, ಮುಂದಿನ ಕಾನೂನು ನಡೆ ಬಗ್ಗೆ ಕುತೂಹಲ ಮೂಡಿದೆ.
ಹೈಕೋರ್ಟ್ ಆದೇಶದಂತೆ ಸಿಎಂ ವಿರುದ್ಧ ಪ್ರಕರಣ ದಾಖಲಾಗಿದ್ದು, ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಬಂಧನವಾಗುತ್ತಾರಾ ಎಂಬ ಪ್ರಶ್ನೆಯಿದೆ. ಸಿದ್ದರಾಮಯ್ಯ ಅವರಿಗೆ ಈ ಪ್ರಕರಣದಲ್ಲಿ ಬಂಧನದ ಭೀತಿ ಎದುರಾಗುವ ಸಾಧ್ಯತೆ ತುಂಬಾನೇ ಕಡಿಮೆಯಿದೆ. ಪ್ರಕರಣವನ್ನು ಸಂಪೂರ್ಣ ತನಿಖೆ ಮಾಡಿದ ಬಳಿಕ ಅಧಿಕಾರಿಗಳು ಸಿಎಂ ಅವರ ಪಾತ್ರದ ಆಧಾರದ ಮೇಲೆ ಅವರನ್ನು ವಿಚಾರಣೆಗೆ ನೋಟಿಸ್ ನೀಡಿ ಕರೆಸಿಕೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ಸಿಎಂಗೆ ಬಂಧನ ಭೀತಿ ಎದುರಾಗುವ ಸಾಧ್ಯತೆಯಿಲ್ಲ.
ನ್ಯಾಯಾಲಯಕ್ಕೆ ದೂರುದಾರ ನೀಡಿದ ಎಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಅದರ ಆಧಾರ ಮೇಲೆ ಎಫ್‌ಐಆರ್ ದಾಖಲಾಗಿದೆ. ಹಲವು ಗಂಭೀರ ಸೆಕ್ಷನ್ ಅಡಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಎಲ್ಲ ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರುಪಡಿಸುವ ಸಾಧ್ಯತೆಯಿದೆ. ಇನ್ನೂ ತನಿಖೆ ನಡೆಸಲು ನ್ಯಾಯಾಲಯ ಮೂರು ತಿಂಗಳ ಗಡುವು ನೀಡಿದ್ದು, ಅದರೊಳಗೆ ತನಿಖೆ ಪೂರ್ಣ ಮಾಡಿ, ಜಾರ್ಜ್‌ಶೀಟ್ ಸಲ್ಲಿಸಬೇಕಿದೆ.
ಇನ್ನು ಈ ತನಿಖೆ ಅಧಿಕಾರಿಗಳ ಕೈಯಲ್ಲಿದ್ದು, ವಿಶೇಷವಾಗಿ ಈ ಪ್ರಕರಣವನ್ನು ನ್ಯಾಯಾಲಯವೇ ತನಿಖೆಗೆ ನೀಡಿರುವುದರಿಂದ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ. ತನಿಖೆ ವೇಳೆ ಸಿದ್ದರಾಮಯ್ಯ ಅವರ ಹೇಳಿಕೆ ಅಥವಾ ಪ್ರಕರಣದ ಬಗ್ಗೆ ಮಾಹಿತಿ ಬೇಕಿದ್ದಲ್ಲಿ ಸಿದ್ದರಾಮಯ್ಯ ಅವರನ್ನು ವಿಚಾರಣೆಗೆ ಕರೆಸಿಕೊಳ್ಳುವ ಸಾಧ್ಯತೆಯಿದೆ.