ದಟ್ಟ ಮಂಜು ಕವಿದ ವಾತಾವರಣದಿಂದಾಗಿ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ಧಾರಿಯಲ್ಲಿ ಅಪಘಾತ ಸಂಭವಿಸಿ ಸುಮಾರು ಒಂಬತ್ತು ವಾಹನಗಳು ಜಕ್ಕಂಗೊಂಡು, ಒರ್ವನಿಗೆ ಗಾಯವಾಗಿರುವ ಘಟನೆ ಟಿ ಬೇಗೂರು ಕ್ರಾಸ್ ಬಳಿ ನಡೆದಿದೆ.
ದಟ್ಟ ಮಂಜಿನಿಂದಾಗಿ ಎದುರಿನ ವಾಹನ ಸ್ಪಷ್ಟವಾಗಿ ಕಂಡಿರಲಿಲ್ಲ, ಹೀಗಾಗಿ ತುಮಕೂರಿನಿಂದ ಬೆಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಚಾಲಕ ಅಚಾನಕ್ ಆಗಿ ಬ್ರೇಕ್ ಹಾಕಿದ್ದಾರೆ. ಹಿಂದೆಯೇ ವೇಗವಾಗಿ ಬರುತ್ತಿದ್ದ ಲಾರಿ ಬಸ್‍ಗೆ ಡಿಕ್ಕಿ ಹೊಡೆದಿದೆ. ಅದರ ಹಿಂದೆ ಇದ್ದ ಖಾಸಗಿ ಬಸ್, ಕಾರು, ತರಕಾರಿ ಲಾರಿ ಸೇರಿದಂತೆ ಒಂಬತ್ತು ವಾಹನಗಳು ಸರಣಿಯಾಗಿ ಡಿಕ್ಕಿ ಹೊಡೆದುಕೊಂಡಿವೆ.
ಅಪಘಾತದ ರಬಸಕ್ಕೆ ಲಾರಿ ಹಾಗೂ ಇತರ ವಾಹನಗಳು ರಸ್ತೆ ವಿಭಜಕದ ಮೇಲೆರಿ, ಚೆಲ್ಲಾಪಿಲ್ಲಿಯಾಗಿ ರಸ್ತೆಗೆ ಸಂಪೂರ್ಣ ಅಡ್ಡಲಾಗಿ ನಿಂತಿವೆ. ಇದರಿಂದ ಹಿಂದಿನಿಂದ ಬಂದ ವಾಹನಗಳು ಚಲಿಸಲಾಗದೆ ಸಂಚಾರ ದಟ್ಟಣೆ ಉಂಟಾಯಿತು. ಮುಂಜಾನೆ ಅಪಘಾತ ಸಂಭವಿಸಿದ್ದು, ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಲು ಪೊಲೀಸರು ಬೆಳಗ್ಗೆ 11 ಗಂಟೆಯವರೆಗೂ ಹರಸಾಹಸ ಪಟ್ಟರು.