ಪಂಜಾಬ್ ರಾಜ್ಯದ ಆಮ್ ಆದ್ಮಿ ಪಾರ್ಟಿ ಸರ್ಕಾರವು ಈವರೆಗೆ ಎಂಟು ಟೋಲ್ ಪ್ಲಾಜಾಗಳನ್ನು ಮುಚ್ಚಿದ್ದು, ಕರ್ನಾಟಕದಲ್ಲೂ ಇದೇ ಮಾದರಿಯನ್ನು ಅನುಸರಿಸಿ ಪ್ರಯಾಣಿಕರಿಗೆ ನೆರವಾಗಬೇಕು ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್ ಕಾಳಪ್ಪ ಆಗ್ರಹಿಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಬ್ರಿಜೇಶ್ ಕಾಳಪ್ಪ, “ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಪಂಜಾಬ್ ಸಿಎಂ ಭಗವಂತ್ ಮಾನ್‌ರವರು ಪ್ರತಿ ಟೋಲ್ ಪ್ಲಾಜಾಗೆ ಹೋಗಿ ಪರಿಶೀಲನೆ ನಡೆಸುತ್ತಿದ್ದಾರೆ. ಪಿಪಿಪಿ ಮಾದರಿಯ ಅಗ್ರಿಮೆಂಟ್‌ನಲ್ಲಿ ಏನಿತ್ತು, ಎಷ್ಟು ಹಣ ಸಂಗ್ರಹವಾಗಬೇಕಿತ್ತು, ಎಷ್ಟು ಹಣ ಸಂಗ್ರಹವಾಗಿದೆ, ಯಾವು ಟೋಲ್ ಸ್ಥಗಿತಗೊಳಿಸಬೇಕಿತ್ತು – ಮುಂತಾದ ಮಾಹಿತಿಗಳನ್ನು ತಿಳಿದುಕೊಂಡು ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈವರೆಗೆ ಎಂಟು ಟೋಲ್ ಪ್ಲಾಜಾಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಕಮಿಷನ್ ಆಸೆಗಾಗಿ ಅವಧಿ ಮುಗಿದರೂ ಟೋಲ್ ಮುಂದುವರಿಸಲು ಅವಕಾಶ ನೀಡಲಾಗಿದೆ. 20 ವರ್ಷದ ಅವಧಿ ಮುಗಿದಿದ್ದರೂ ಇರುವ ತುಮಕೂರು ಟೋಲ್ ಪ್ಲಾಜಾ ಸೇರಿದಂತೆ ಅನೇಕ ಅವಧಿ ಮುಗಿದ ಟೋಲ್‌ಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಪೆಟ್ರೋಲ್ ಬೆಲೆ ಏರಿಕೆಯಿಂದ ಈಗಾಗಳೇ ಹೈರಾಣಾಗಿರುವ ಜನರಿಗೆ ಟೋಲ್‌ಗಳಿಂದಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ” ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು.
“ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯು ದಶಪಥವಲ್ಲ, ಆರು ಪಥವೆಂದು ನಾವು ಹೇಳಿದ್ದೆವು. ನಂತರ ಸರ್ಕಾರ ಕೂಡ ಇದನ್ನು ಒಪ್ಪಿಕೊಂಡಿದೆ. ಆ ಹೆದ್ದಾರಿಯನ್ನು 2 ಪಥದಿಂದ 4 ಪಥ ಮಾಡುವಾಗ ಟೋಲ್ ವಿಧಿಸಿರಲಿಲ್ಲ. ಅದೇ ರೀತಿ ಈಗ 4 ಪಥದಿಂದ 6 ಪಥ ಮಾಡುವುದಾಗಲೂ ಟೋಲ್ ವಿಧಿಸದೇ ಜನಸಾಮಾನ್ಯರಿಗೆ ನೆರವಾಗಬೇಕಿತ್ತು. ಉಚಿತವಾಗಿ ರಸ್ತೆ ನೀಡಿ ಸರ್ಕಾರ ಜಂಭದಿಂದ ಪ್ರಚಾರ ಪಡೆದಿದ್ದರೆ, ಅದಕ್ಕೊಂದು ಅರ್ಥವಿರುತ್ತಿತ್ತು. ದೆಹಲಿಯ ಆಮ್ ಆದ್ಮಿ ಪಾರ್ಟಿಯು ಸರ್ಕಾರಿ ಶಾಲೆಗಳಲ್ಲಿ ಈಜುಕೊಳ ತೆರೆದರೆ, ಬಿಜೆಪಿ ಸರ್ಕಾರಗಳು ತೆರೆದ ರಸ್ತೆಗಳಲ್ಲಿ ಈಜುಕೊಳಗಳು ತನ್ನಿಂತಾನೇ ಸೃಷ್ಟಿಯಾಗಿವೆ” ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು.
“2019-20ರಲ್ಲಿ ಹಿರಿಯ ಐಎಎಸ್ ಅಧಿಕಾರಿ ಅನಿಲ್ ಕುಮಾರ್‌ರವರು ಬಿಬಿಎಂಪಿ ಕಮಿಷನರ್ ಆಗಿದ್ದರು. ಈಗವರು ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಅವರು ಬಿಬಿಎಂಪಿ ಕಮಿಷನರ್ ಆಗಿದ್ದ ಸಂದರ್ಭದಲ್ಲಿ ಮೂರು ಪ್ರಮುಖ ಅಕ್ರಮಗಳು ನಡೆದಿವೆ. ಸ್ಮಾರ್ಟ್ ಪಾರ್ಕಿಂಗ್‌ಗೆ 31.6 ಕೋಟಿ ರೂ. ಮಂಜೂರು ಮಾಡಲಾಗಿತ್ತು. ಅಷ್ಟು ಹಣ ಖರ್ಚಾಗದಿದ್ದರೂ ಹೆಚ್ಚುವರಿಯಾಗಿ 2 ಕೋಟಿ ರೂ. ಬಿಡುಗಡೆಯಾಗಿದೆ. ಅನಿಲ್ ಕುಮಾರ್‌ರವರು ಗುತ್ತಿಗೆ ಸಂಸ್ಥೆಯಾದ ಬಿಲ್ಡಿಂಗ್ಸ್ ಕಂಟ್ರೋಲ್ ಸೊಲ್ಯೂಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಇದನ್ನು ಬಿಡುಗಡೆ ಮಾಡಿಸಿದ್ದಾರೆ” ಎಂದು ಬ್ರಿಜೇಶ್ ಕಾಳಪ್ಪ ಆರೋಪಿಸಿದರು.
“ಅನಿಲ್ ಕುಮಾರ್ ಕಮಿಷನರ್ ಆಗಿದ್ದ ಸಂದರ್ಭದಲ್ಲಿ ಮಳೆ ನೀರಿನ ಹೂಳು ತೆಗೆಯುವ ಕಾಮಗಾರಿಯಲ್ಲಿ ಅವ್ಯವಹಾರವಾಗಿದೆ. ಎಂಟು ವಲಯಗಳ ಗುತ್ತಿಗೆಯನ್ನು ಮೆಸರ್ಸ್ ಯೋಗ ಅಂಡ್ ಕಂಪನಿ ಎಂಬ ಒಂದೇ ಸಂಸ್ಥೆಗೆ 36 ಕೋಟಿ ರೂ. ಮೊತ್ತಕ್ಕೆ ನೀಡಲಾಗಿದೆ. ಈ ಕಾಮಗಾರಿ ಸರಿಯಾಗಿ ನಡೆಯದಿರುವುದರಿಂದ ಬೆಂಗಳೂರಿನಲ್ಲಿ ಪ್ರವಾಹ ನೋಡಬೇಕಾಯಿತು. ಅಗತ್ಯಕ್ಕಿಂತ ಹೆಚ್ಚು ಹಣ ಬಿಡುಗಡೆ ಮಾಡಿ ಜನರ ತೆರಿಗೆ ಹಣವನ್ನು ಲೂಟಿ ಮಾಡಲಾಗಿದೆ” ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು.
“ಅನಿಲ್ ಕುಮಾರ್ ಕಮಿಷನರ್ ಆಗಿದ್ದ ಸಂದರ್ಭದಲ್ಲಿ ಕೊಳವೆ ಬಾವಿಗಳ ಕಾಮಗಾರಿಗೆ ಬಿಬಿಎಂಪಿಯು 969 ಕೋಟಿ ರೂ. ಬಿಡುಗಡೆ ಮಾಡಿದೆ. ಇಷ್ಟು ದೊಡ್ಡ ಪ್ರಮಾಣದ ಹಣವು ಹೇಗೆ ಬಳಕೆಯಾಗಬೇಕು ಎಂಬ ಬಗ್ಗೆ ಸೂಕ್ತ ತನಿಖೆಯಾಗಬೇಕು. ಇದರಲ್ಲಿ ಒಂದೇ ಕಡೆ 49 ಕೋಟಿ ರೂ. ಖರ್ಚು ಮಾಡಿರುವುದೂ ಇದೆ. ಇದಲ್ಲದೇ, ಕೋವಿಡ್ ಚಿಕಿತ್ಸೆಗಾಗಿ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಯಲಯದಲ್ಲಿ ಚಿಕಿತ್ಸಾ ಕೇಂದ್ರ ತೆರೆಯಲಾಗಿತ್ತು. ಅಲ್ಲಿಗೆ ಹಾಸಿಗೆ ಮುಂತಾದವುಗಳಿಗೆ ಕೋಟ್ಯಂತರ ಹಣ ಖರ್ಚು ಮಾಡಿರುವುದರಲ್ಲಿಯೂ ಭಾರೀ ಪ್ರಮಾಣದ ಅಕ್ರಮ ನಡೆದಿದೆ. ಅನಿಲ್ ಕುಮಾರ್ ಕಮಿಷನರ್ ಆಗಿದ್ದಾಗ ಸುಮಾರು 1300 ಕೋಟಿ ರೂ. ಮೊತ್ತದ ಅಕ್ರಮಗಳು ನಡೆದಿವೆ. ಇವೆಲ್ಲವುಗಳ ತನಿಖೆಗಾಗಿ ಲೋಕಾಯುಕ್ತಕ್ಕೆ ದೂರು ನೀಡುತ್ತೇವೆ” ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು.
ಆಮ್ ಆದ್ಮಿ ಪಾರ್ಟಿ ರಾಜ್ಯ ಕಾರ್ಯಾಧ್ಯಕ್ಷರಾದ ಬಿ.ಟಿ.ನಾಗಣ್ಣ ಮಾತನಾಡಿ, “ಒಂದು ಲೀಟರ್ ಪೆಟ್ರೋಲ್‌ಗೆ 9 ರೂಪಾಯಿ ಸೆಸ್ ವಿಧಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗಾಗಿಗೇ ಈ ಸೆಸ್ ಸಂಗ್ರಹಿಸಲಾಗುತ್ತಿದೆ. ಹೀಗಿರುವಾಗ ಪ್ರತ್ಯೇಕವಾಗಿ ಟೋಲ್ ಸಂಗ್ರಹಿಸುವ ಅವಶ್ಯಕತೆ ಏನಿದೆ? ಬೆಂಗಳೂರಿನಿಂದ ಮೈಸೂರಿಗೆ ಹೋಗಿ ಹಿಂದಿರುಗಲು ವಾಹನಸವಾರರು ಸೆಸ್ ಹಾಗೂ ಟೋಲ್‌ಗಾಗಿ ಒಟ್ಟು 450 ರೂಪಾಯಿ ಖರ್ಚು ಮಾಡಬೇಕಾಗಿದೆ” ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿ ರಾಜ್ಯ ಕಾರ್ಯಾಧ್ಯಕ್ಷರಾದ ವಿಶ್ವನಾಥ್, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಉಪಸ್ಥಿತರಿದ್ದರು.