ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಯಿಂದ ಹುತಾತ್ಮರಾದ ಯೋಧರಿಗೆ ದೇಶಾದ್ಯಂತ ಮೇಣದಬತ್ತಿ ಹಚ್ಚುವದು, ದೀಪ ಬೆಳಗುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿರುವದನ್ನು ನಾವು ನೋಡಿದ್ದೇವೆ. ಆದ್ರೆ ಇಲ್ಲೊಂದು ಜೋಡಿ ವಿಭಿನ್ನವಾಗಿ ನಮನ ಸಲ್ಲಿಸಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೊಂದು ನವಜೋಡಿ ಮಾತ್ರ ಭಿನ್ನವಾಗಿ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದೆ. ತಮ್ಮ ನಿಶ್ಚಿತಾರ್ಥ ಸಮಾರಂಭದಲ್ಲಿ ನೃತ್ಯ ಮಾಡುವ ಮೂಲಕ ವೀರಯೋಧರಿಗಾಗಿ ದೇಣಿಗೆ ಸಂಗ್ರಹ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಈ ಮೂಲಕ ಯೋಧರ ಕುಟುಂಬಕ್ಕೆ ಸಹಾಯ ಮಾಡುವ ಸೇವೆ ಮಾಡಲಾಗಿದೆ.
ಕೃಷ್ಣ ಇರಕಲ್ ಹಾಗೂ ಕೀರ್ತಿ ಇರಕಲ್ ನವಜೋಡಿಯೇ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ನೃತ್ಯ ಮಾಡಿ ದೇಣಿಗೆ ಸಂಗ್ರಹಿಸಿದರು. ತಮ್ಮ ನಿಶ್ಚಿತಾರ್ಥವನ್ನು ಹುತಾತ್ಮ ಯೋಧರಿಗೆ ಅರ್ಪಣೆ ಮಾಡಿದ ಅವರು, ನಿಶ್ಚಿತಾರ್ಥ ಕಾರ್ಯಕ್ರಮದ ವೇದಿಕೆಯಲ್ಲಿ ದೇಶಭಕ್ತಿ ಗೀತೆಗಳಿಗೆ ನೃತ್ಯ ಮಾಡಿ ಕಾರ್ಯಕ್ರಮಕ್ಕೆ ಬಂದವರಿಂದ ದೇಣಿಗೆ ಪಡೆದರು. ಇದಕ್ಕೆ ಸಹಕರಿಸಿದ ಸಂಬಂಧಿಕರು ಖುಷಿಯಿಂದಲ್ಲೇ ದೇಣಿಗೆ ನೀಡಿದರು. ಒಟ್ಟಿನಲ್ಲಿ ಮದುವೆ, ನಿಶ್ಚಿತಾರ್ಥಕ್ಕೆ ಸಂಬಂಧಿಸಿದಂತೆ ಈಗಿನ ಯುವತಿ ಯುವಕರು ಹಲವಾರು ಕನಸುಗಳನ್ನು ಕಂಡಿರುತ್ತಾರೆ.
ಇಂತವರ ನಡುವೆ ಈ ನವಜೋಡಿ ಮಾತ್ರ ತಮ್ಮ ನಿಶ್ಚಿತಾರ್ಥವನ್ನು ಯೋಧರಿಗೆ ಅರ್ಪಣೆ ಮಾಡಿ ಅವರ ಕುಟುಂಬಕ್ಕಾಗಿ ಸಹಾಯವಾಗಲೆಂದು ನೃತ್ಯ ಮಾಡಿ ದೇಣಿಗೆ ಪಡೆಯುವ ಮೂಲಕ ಆಧುನಿಕ ಜಗತ್ತಿನಲ್ಲಿ ವಿಶಿಷ್ಟವಾಗಿ ನಿಂತು ಗಮನ ಸೆಳೆದಿದೆ.