ಮುಸ್ಲಿಂ ಮಹಿಳೆಗೆ ಡ್ರಾಪ್ ನೀಡಿದ ಹಿಂದೂ ಯುವಕನಿಗೆ ಕೆಲ ಮುಸ್ಲಿಂ ಪುಂಡರು ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಸುದ್ದುಗುಂಟೆಪಾಳ್ಯ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಮಹಿಳೆ ನೀಡಿದ ದೂರಿನ ಹಿನ್ನೆಲೆ ಮುಸ್ಲಿಂ ಯುವಕ ಸೋಹೆಲ್ ಹಾಗೂ ನಯಾಜ್ ಮೇಲೆ ಐಪಿಸಿ ಸೆಕ್ಷನ್ 153(ಎ), 506, 341, 34, 504, 323 ಹಾಗೂ 354 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಮುಸ್ಲಿಂ ಮಹಿಳೆ ಕೊಟ್ಟ ದೂರಿನಲ್ಲೇನಿದೆ?: ಕಾರ್ಯಕ್ರಮವಿದ್ದ ಕಾರಣಕ್ಕೆ ಕಚೇರಿಯಿಂದ ಹೋರಾಡಲು ತಡವಾಗಿತ್ತು. ಹೀಗಾಗಿ, ಡ್ರಾಪ್ ಪಡೆಯುವುದಾಗಿ ಮನೆಯವರ ಅನುಮತಿ ಪಡೆದಿದ್ದೆ. ಅದರಂತೆ ಸಹೋದ್ಯೋಗಿ ಮಹೇಶ್ ಜೊತೆಯಲ್ಲಿ ಬರುತ್ತಿದ್ದೆ. ರಾತ್ರಿ ಸುಮಾರು 9.20ರ ವೇಳೆಗೆ ಅಪರಿಚಿತ ವ್ಯಕ್ತಿಗಳು ಡೈರಿ ಸರ್ಕಲ್ ಬಳಿ ಬೈಕ್ ತಡೆದಿದ್ದಾರೆ. ಈ ವೇಳೆ ನನ್ನ ಪತಿಯ ಮೊಬೈಲ್ ನಂಬರ್ ಪಡೆದು ಮುಖಕ್ಕೆ ಮೊಬೈಲ್ ಟಾರ್ಚ್ ಹಾಕಿದರು. ನಂತರ ಮಹೇಶ್ ಮೇಲೆ ಹಲ್ಲೆ ಮಾಡಿದರು. ಹಿಂದೂ ಹುಡುಗನ ಜೊತೆ ಯಾಕೆ ಹೋಗುತ್ತಿದ್ದಿಯಾ? ಎಂದು ಬೆದರಿಸಿದರು. ಹೋಗುವುದಾದರೆ ಬುರ್ಖಾ ತೆಗೆದು ಹೋಗು ಎಂದರು. ಇದಾದ ಬಳಿಕ ಆಟೋ ತೆಗೆದುಕೊಂಡು ಮನೆಗೆ ಹೋಗುವಂತೆ ಬೆದರಿಕೆ ಹಾಕಿದ್ದಾರೆ. ನನಗೆ ಭಯವಾಗಿ ಬಾಡಿಗೆ ಆಟೋ ತಗೊಂಡು ಮನೆಗೆ ಹೋದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಎಫ್ಐಆರ್ ಪ್ರತಿ
ಆರೋಪಿಗಳ ಮೇಲೆ ಹಾಕಿರುವ ಸೆಕ್ಷನ್‌ಗಳೇನು?:
* ಐಪಿಸಿ 153(A): ಉದ್ದೇಶಪೂರ್ವಕವಾಗಿ ಎರಡು ಧರ್ಮಗಳ ಮಧ್ಯೆ ದ್ವೇಷ ಉಂಟುಮಾಡುವುದು. ಮೂರು ವರ್ಷದವರೆಗೂ ಶಿಕ್ಷೆ ಹಾಗೂ ದಂಡ, ಜಾಮೀನು ರಹಿತ ಪ್ರಕರಣ.
* ಐಪಿಸಿ ಸೆಕ್ಷನ್ 506: ಜೀವ ಬೆದರಿಕೆ (2 ವರ್ಷ ಶಿಕ್ಷೆ ಹಾಗೂ ದಂಡ )
* ಐಪಿಸಿ 341: ಅಕ್ರಮವಾಗಿ ತಡೆಯುವುದು (ಒಂದು ತಿಂಗಳು ಶಿಕ್ಷೆ, ದಂಡ )
* ಐಪಿಸಿ 34: ಒಂದೇ ಉದ್ದೇಶದಿಂದ ಎರಡು ಮೂರು ಜನರಿಗೆ ನೋವುಂಟು ಮಾಡುವುದು.
* ಐಪಿಸಿ 504: ಮಾನಹಾನಿ ಮಾಡುವುದು.
* ಐಪಿಸಿ 323: ಮನಸ್ಸಿಗೆ ಘಾಸಿ ಮಾಡುವುದು (1 ವರ್ಷ ಶಿಕ್ಷೆ)
* ಐಪಿಸಿ 354: ಮಹಿಳೆ ಮೇಲೆ ದೌರ್ಜನ್ಯ (2 ರಿಂದ 3 ವರ್ಷ ಜೈಲು ಶಿಕ್ಷೆ ಹಾಗೂ ದಂಡ)