Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕರ್ನಾಟಕದಲ್ಲಿ ಇನ್ನೇನು ಅಧಿಕಾರಕ್ಕೆ ಬಂದೇಬಿಟ್ಟೆವು ಎಂದು ಬೀಗುತ್ತಿದ್ದವರಿಗೆ ಪಂಚರಾಜ್ಯಗಳ ಫಲಿತಾಂಶ ಶಾಕ್ ನೀಡಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕಾಂಗ್ರೆಸ್ ಪಕ್ಷಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮೀಕ್ಷೆಗಳು ಭವಿಷ್ಯ ನುಡಿದಂತೆ ಚುನಾವಣೆ ಫಲಿತಾಂಶ ಬರುತ್ತಿದೆ. ನೂರಾರು ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಜ್ಜಾನೋದಯ ಮಾಡಿಕೊಳ್ಳುವ ಫಲಿತಾಂಶ ಇದಾಗಿದೆ. ಜೆಡಿಎಸ್ ಮುಗಿಸಲು ಹೋದವರಿಗೆ ಪಾಠ ಕಲಿಸಿದ ಚುನಾವಣಾ ಫಲಿತಾಂಶ ಇದಾಗಿದೆ ಹಾಗೂ ಭಾರತೀಯ ಜನತಾ ಪಕ್ಷಕ್ಕೆ ಪೈಪೋಟಿ ನೀಡಲು ಜೆಡಿಎಸ್ ಸೂಕ್ತ ಎಂಬುದು ಸಾಬೀತಾಗಿದೆ ಎಂದು ಅವರು ತಿಳಿಸಿದರು. ಇನ್ನೂ ನೀರಾವರಿ ವಿಚಾರಗಳನ್ನು ಮುಂದಿಟ್ಟುಕೊಂಡು ನಾವು ಹೋರಾಟ ಮಾಡುತ್ತೇವೆ ಎಂದ ಅವರು, ಐದು ರಾಜ್ಯಗಳ ಪರಿಸ್ಥಿತಿ ಬೇರೆ. ಹಿಂದೆ ಪಶ್ಚಿಮ ಬಂಗಾಳದಲ್ಲಿ ಬಂದ ಫಲಿತಾಂಶ ಹಾಗೂ ಪಂಜಾಬ್ ನಲ್ಲಿ ಆಗಿರುವ ಬದಲಾವಣೆ ನಮಗೆ ಪ್ರೇರಣೆ ತಂದಿದೆ ಎಂದು ಹೇಳಿದ್ದಾರೆ.