ರಾಜ್ಯದಲ್ಲಿ ಅಂಗಾಂಗ ದಾನ ಹೆಚ್ಚುತ್ತಿದ್ದು, ಕಳೆದ ವರ್ಷ ನಡೆದ ಅಂಗಾಂಗ ದಾನಗಳಿಂದಾಗಿ 389 ಜನರು ಮರು ಜೀವ ಪಡೆದಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಬೆಂಗಳೂರು ಮೆಡಿಕಲ್ ಸರ್ವಿಸಸ್ ಟ್ರಸ್ಟ್-BMST ಯಿಂದ ಆಯೋಜಿಸಿದ್ದ, ʼಅನ್‌ಸಂಗ್ ಹೀರೋಸ್ʼ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಅಂಗಾಂಗ ದಾನದ ನಿರ್ವಹಣೆಗೆ ರಾಜ್ಯದಲ್ಲಿ ಸೊಟ್ಟೊ ಎಂಬ ಸಂಸ್ಥೆ ಇದೆ. ಕಳೆದ ಮೂರು ವರ್ಷಗಳಲ್ಲಿ ಅಂಗಾಂಗ ದಾನಕ್ಕೆ ಹೆಚ್ಚು ಒತ್ತು ನೀಡಿ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಇದರಿಂದ ಅಂಗಾಂಗ ದಾನದ ಪ್ರಮಾಣ ಹೆಚ್ಚಾಗಿದೆ. ಅಂಗಾಂಗ ದಾನ ಮಾಡುವವರು ಸಾವಿನ ನಂತರವೂ ಮತ್ತೊಬ್ಬರ ಬದುಕಿಗೆ ದಾರಿ ದೀಪವಾಗಿ ಜೀವಿಸುತ್ತಾರೆ. ಇಂತಹ ಪುಣ್ಯದ ಕೆಲಸ ಮತ್ತೊಂದಿಲ್ಲ. ಕಳೆದ ವರ್ಷ ಅಂಗಾಂಗ ದಾನದಿಂದಾಗಿ 389 ಜನರು ಮರು ಜೀವ ಪಡೆದಿದ್ದಾರೆ. ಕೋವಿಡ್ ಸಮಯದಲ್ಲಿ ಕೂಡ ಜಾಗೃತಿ ಕಾರ್ಯಕ್ರಮಗಳಿಂದಾಗಿ ಅಂಗಾಂಗ ದಾನ ನಡೆದಿದೆ. ಹಾಗೆಯೇ ದಾನಕ್ಕೆ ಹೆಸರು ನೋಂದಣಿ ಪ್ರಕ್ರಿಯೆ ಕೂಡ ನಡೆದಿದೆ ಎಂದು ವಿವರಿಸಿದರು.
ರಕ್ತದಾನ ಮಹಾದಾನ ಎಂದು ಹೇಳಲಾಗುತ್ತದೆ. ಹಾಗೆಯೇ, ಅಂಗಾಂಗ ದಾನ ಸರ್ವಶ್ರೇಷ್ಠ ದಾನವಾಗಿದೆ. ಒಬ್ಬ ವ್ಯಕ್ತಿ ಮರಣದ ಬಳಿಕ 8 ಜನರಿಗೆ ಅಂಗಾಂಗಗಳನ್ನು ದಾನ ಮಾಡಬಹುದು. ವ್ಯಕ್ತಿ ಸತ್ತಾಗ ಕುಟುಂಬದವರು ಬಹಳ ದುಃಖದಲ್ಲಿರುತ್ತಾರೆ. ಅಂತಹ ಸಂದರ್ಭದಲ್ಲಿ ವೈದ್ಯರು ಕುಟುಂಬದವರ ಮನ ಒಲಿಸಿ ಅಂಗಾಂಗ ದಾನ ಮಾಡಿಸುತ್ತಾರೆ. ಹಾಗೆಯೇ ಕಡಿಮೆ ಸಮಯದೊಳಗೆ ಮಾಡುವ ಕಸಿಗಾಗಿ ಸಂಚಾರಿ ಪೊಲೀಸರು ಗ್ರೀನ್ ಕಾರಿಡಾರ್ ನಿರ್ಮಿಸುತ್ತಾರೆ. ಕೆಲ ಸಂದರ್ಭದಲ್ಲಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದರು.
ನಾನು ಸಚಿವನಾಗಿ ಅಧಿಕಾರ ಸ್ವೀಕರಿಸಿದಾಗ, ರಾಜ್ಯದಲ್ಲಿ ಒಂದೇ ಒಂದು ಅಂಗಾಂಗ ಪಡೆಯುವ ಕೇಂದ್ರ ಇತ್ತು. ಬಳಿಕ ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಸೇರಿದಂತೆ ಹಲವೆಡೆ ಒಟ್ಟು 19 ಕೇಂದ್ರಗಳನ್ನು ನಿರ್ಮಿಸಲಾಗಿದೆ. ಇದು ಅತೀವ ಹೆಮ್ಮೆಯ ಸಂಗತಿ ಎಂದರು.