Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಾವೇರಿ ಕೂಗು ಭಾಗ 2ರಲ್ಲಿ 3.5 ಕೋಟಿ ಸಸಿ ನೆಡುವ ಗುರಿ

ಕಾವೇರಿ ಕೂಗು ಭಾಗ 2ರಲ್ಲಿ 3.5 ಕೋಟಿ ಸಸಿ ನೆಡುವ ಗುರಿ
ಬೆಂಗಳೂರು , ಮಂಗಳವಾರ, 3 ಆಗಸ್ಟ್ 2021 (08:44 IST)
ಬೆಂಗಳೂರು (ಆ.03):  ‘ಕಾವೇರಿ ಕೂಗು’ ಅಭಿಯಾನದ ಎರಡನೇ ಹಂತವಾಗಿ ಕಾವೇರಿ ನದಿ ಕಣಿವೆಯಲ್ಲಿ 3.5 ಕೋಟಿ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಲು ಈಶಾ ಫೌಂಡೇಷನ್ ಸೋಮವಾರ ನಿರ್ಣಯ ಕೈಗೊಂಡಿದೆ.

ಈ ಸಂಬಂಧ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೌಂಡೇಷನ್ನ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ, ಕಾವೇರಿ ನದಿ ನೀರಿನ ಹರಿವು ಕಡಿಮೆಯಾಗದಂತೆ ನೋಡಿಕೊಳ್ಳುವುದು, ಮಣ್ಣಿನ ಸವಕಳಿ ತಡೆಗಟ್ಟುವ ನಿಟ್ಟಿನಲ್ಲಿ ಫೌಂಡೇಷನ್ ನಡೆಸುತ್ತಿರುವ ಮೊದಲ ಹಂತದ ಅಭಿಯಾನದಲ್ಲಿ 1.1 ಕೋಟಿ ಗಿಡಗಳನ್ನು ನೆಡಲಾಗಿದೆ. ಇದೀಗ ಎರಡನೇ ಹಂತದ ಅಭಿಯಾನ ಪ್ರಾರಂಭಿಸುತ್ತಿದ್ದು, ಮುಂದಿನ ಒಂದು ವರ್ಷದಲ್ಲಿ 3.5 ಕೋಟಿ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.
ಕಾವೇರಿ ಕೂಗು ಅಭಿಯಾನದ ಆಡಳಿತ ಮಂಡಳಿಯ ಸದಸ್ಯರ ಸಭೆ ಇತ್ತೀಚೆಗೆ ನಡೆದಿದ್ದು, ಈ ವರ್ಷದ ಯೋಜನಾ ವರದಿಯನ್ನು ಸಿದ್ಧಪಡಿಸಿದೆ. ಆ ಪ್ರಕಾರವಾಗಿ ಕರ್ನಾಟಕದ 57 ತಾಲೂಕುಗಳ 1,785 ಗ್ರಾಮಗಳು ಅಭಿಯಾನದ ಭಾಗವಾಗಲಿವೆ ಎಂದರು.
ಮೊದಲನೇ ಹಂತದ ಅಭಿಯಾನಕ್ಕೆ 2019ರಲ್ಲಿ ಚಾಲನೆ ನೀಡಿದ್ದು, ತಮಿಳುನಾಡು ಮತ್ತು ಕರ್ನಾಟಕದ ಭಾಗದಲ್ಲಿ ಕಾವೇರಿ ನೀರು ಹರಿಯುವ ಸ್ಥಳದಲ್ಲಿ 242 ಕೋಟಿ ಮರಗಳನ್ನು ನೆಡುವ ಉದ್ದೇಶ ಹೊಂದಿದ್ದೇವೆ. 2020ರ ಅಂತ್ಯಕ್ಕೆ 189 ತಾಲೂಕುಗಳಲ್ಲಿ 1.1 ಕೋಟಿ ಸಸಿಗಳನ್ನು ನೆಡಲಾಗಿದೆ. ಇದರಲ್ಲಿ 33 ಸಾವಿರ ರೈತರು ಭಾಗಿಯಾಗಿದ್ದಾರೆ. 2021ರ ಅಭಿಯಾನ ಆರಂಭಕ್ಕೆ ಸಿದ್ಧತೆ ನಡೆದಿದ್ದು, ಇದಕ್ಕಾಗಿ ಗ್ರಾಮಗಳಲ್ಲಿ ಗ್ರಾಮ ಸಂಪರ್ಕ ಸಭೆಗಳನ್ನು ನಡೆಸಿದ್ದೇವೆ. ಗ್ರಾಮಗಳ ಹಂತದಲ್ಲಿ 890 ಮರ ಮಿತ್ರರನ್ನು ನೇಮಿಸಿದ್ದೇವೆ ಎಂದರು.
ಇದರ ಸಲುವಾಗಿ ಕರ್ನಾಟಕ ರಾಜ್ಯದ 9 ಜಿಲ್ಲೆಗಳನ್ನು ಗುರುತಿಸಲಾಗಿದೆ. ಪ್ರತಿ ಹಳ್ಳಿಯಲ್ಲಿ ರೈತರೊಂದಿಗೆ ಸಂಪರ್ಕ ಸಭೆ ನಡೆಸಿ ಅವರಿಗೆ ಬೇಕಾದಂತಹ ಗಿಡಗಳ ಪಟ್ಟಿಯನ್ನು ಮಾಡಿದ್ದೇವೆ. ಈ ಗಿಡಗಳು ಮುಂದೆ ರೈತರಿಗೆ ಲಾಭವಾಗಲಿವೆ ಎಂಬ ಸತ್ಯ ಅವರ ಅರಿವಿಗೆ ಬರಬೇಕಿದೆ. ಈ ಯೋಜನೆಯನ್ನು ಮುಂದಿನ 12 ವರ್ಷಗಳವರೆಗೂ ನಡೆಸುವ ಉದ್ದೇಶ ಇದೆ. ಮುಂದಿನ 25 ವರ್ಷಗಳಲ್ಲಿ ರೈತರಿಗೆ ಸಾಕಷ್ಟುಲಾಭ ತಂದುಕೊಡುವುದರಲ್ಲಿ ಯಾವುದೇ ಅನುಮಾನ ಇರುವುದಿಲ್ಲ ಎಂದು ತಿಳಿಸಿದರು.
ಕೊರೋನಾ ಮೂರನೇ ಅಲೆ ಆಗಮಿಸುವ ಮುನ್ಸೂಚನೆ ಇದೆ, ನಿಮ್ಮ ಅಭಿಯಾನ ಯಾವ ರೀತಿಯಲ್ಲಿ ನಡೆಯಲಿದೆ ಎಂದು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ಮೂರನೇ ಅಲೆಯನ್ನು ಬಯಸುವುದು ಬೇಡ. ಕೊರೋನಾ ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೆ, ಅದನ್ನು ತಡೆಗೆಟ್ಟಬಹುದು. ನಮ್ಮ ಎಲ್ಲ ಕಾರ್ಯಕ್ರಮಗಳಲ್ಲೂ ನಾವು ಅದನ್ನು ಪಾಲಿಸುತ್ತಿದ್ದೇವೆ ಎಂದು ವಿವರಿಸಿದರು.
ಮಣ್ಣಿನ ಸಂರಕ್ಷಣೆ ಅಗತ್ಯ:  ಮಣ್ಣಿನಲ್ಲಿ ಸಾವಯವ ಅಂಶ ಕುಸಿಯುತ್ತಿದೆ. ಇದನ್ನು ಹೆಚ್ಚಳ ಮಾಡಬೇಕಾದಲ್ಲಿ ಅರಣ್ಯೀಕರಣ ಮತ್ತು ಪರಿಸರದ ಸಂರಕ್ಷಣೆಯಿಂದ ಸಾಧ್ಯ. ರಾಸಾಯನಿಕ ಅಂಶಗಳನ್ನು ಬಳಕೆ ಮಾಡುವುದರಿಂದ ಮಣ್ಣಿನ ಫಲವತ್ತತೆ ನಾಶವಾಗಲಿದೆ. ಕೃಷಿ ಕಾರ್ಯಗಳಿಗೆ ಬಳಕೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಲಿದ್ದು, ಆಹಾರ ಭದ್ರತೆಗೆ ತೊಂದರೆಯಾಗುವ ಸಾಧ್ಯತೆಯಿರಲಿದೆ ಎಂದು ಅವರು ಆತಂಕ ವ್ಯಕ್ತ ಪಡಿಸಿದರು.
ಮೇಕೆದಾಟು ಬಗ್ಗೆ ಮಾತನಾಡುವುದಿಲ್ಲ: ಸದ್ಗುರು
ಕಾವೇರಿ ನದಿ ಸಂರಕ್ಷಣೆ ನಮ್ಮ ಮೊದಲ ಆದ್ಯತೆ. ಮೇಕೆದಾಟು ಸೇರಿದಂತೆ ಇನ್ನಿತರೆ ವಿವಾದಗಳನ್ನು ರಾಜಕೀಯ ನಾಯಕರು ನೋಡಿಕೊಳ್ಳುತ್ತಾರೆ. ಈ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಜಗ್ಗಿ ವಾಸುದೇವ್ ತಿಳಿಸಿದರು. ಮೇಕೆದಾಟು ವಿವಾದ ಸಂಬಂಧದ ಪ್ರಶ್ನೆಗೆ ಉತ್ತರಿಸಿದ ಅವರು, ಯೋಜನೆಗಳ ಅನುಷ್ಠಾನದ ವಿಚಾರಗಳನ್ನು ಆಯಾ ರಾಜ್ಯ ಸರ್ಕಾರಗಳು ನೋಡಿಕೊಳ್ಳುತ್ತವೆ. ಕಾವೇರಿ ನದಿ, ನದಿ ಕಣಿವೆ ಪ್ರದೇಶ ಮತ್ತು ರೈತರ ಸಂರಕ್ಷಣೆ ನಮ್ಮ ಗುರಿಯಾಗಿದೆ ಎಂದು ಪ್ರತಿಕ್ರಿಯಿಸಿದರು. ಅಲ್ಲದೆ, ಭಾಷೆ ಯಾವುದೇ ಆದರೂ ನೀರು ಒಂದೇ ಆಗಿದೆ. ಎಲ್ಲರಿಗೂ ನೀರು ಬೇಕಿದೆ. ಇಂತಹ ಸಮಯದಲ್ಲಿ ನಾನು ವಿವಾದಗಳ ಬಗ್ಗೆ ಗಮನ ಹರಿಸುವುದಿಲ್ಲ. ಈ ವಿವಾದ ಶೀಘ್ರ ಇತ್ಯರ್ಥವಾಗಬೇಕು ಎನ್ನುವುದು ನನ್ನ ಆಶಯವಾಗಿದೆ ಎಂದರು.
ಪರಿಸರ ಮಾಲಿನ್ಯವಾಗುತ್ತಿರುವ ಈ ಸಂದರ್ಭದಲ್ಲಿ ಈಶಾ ಫೌಂಡೇಷನ್ ಪರಿಸರ ಉಳಿಸುವ ಕೆಲಸ ಕೈಗೆತ್ತಿಕೊಂಡಿದೆ. ಈ ಬೆಳವಣಿಗೆ ನಿಜಕ್ಕೂ ಉತ್ತಮವಾದ ಕೆಲಸವಾಗಿದೆ ಎಂದು ಇಸ್ರೋದ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಹೇಳಿದರು. ಕಾವೇರಿ ಕೂಗು ಪರಿಸರ ಸಂರಕ್ಷಣೆಯ ಅಭಿಯಾನವಾಗಿದ್ದು, ಇದು ಆರಂಭವಾದ ಮೇಲೆ ಸರ್ಕಾರ ಇದನ್ನು ಮಾದರಿಯಾಗಿಟ್ಟುಕೊಂಡು ಇದೇ ರೀತಿಯಲ್ಲಿ ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಇದರಿಂದ ಮುಂದಿನ ಪೀಳಿಗೆಗೂ ನೆರವಾಗಲಿದೆ ಎಂದರು.


Share this Story:

Follow Webdunia kannada

ಮುಂದಿನ ಸುದ್ದಿ

9ರ ಬಾಲಕಿ ಮೇಲೆ ಸ್ಮಶಾನದಲ್ಲಿ ಅತ್ಯಾಚಾರ!