ಬೆಂಗಳೂರು: ಬೆಳ್ಳಂ ಬೆಳಗ್ಗೆ ಚುಮು ಚುಮು ಚಳಿಯಲ್ಲಿ ಹೊದ್ದು ಮಲಗಿದ್ದ 180 ರೌಡಿಗಳ ಮನೆ ಬಾಗಿಲು ಬಡಿದ ನಗರದ ಪಶ್ಚಿಮ ವಿಭಾಗದ ಪೊಲೀಸರು ಠಾಣೆಗೆ ಕರೆತಂದು ಇಡೀ ದಿನ ಡ್ರಿಲ್ ಮಾಡಿದ್ದಾರೆ. ಅಪರಾಧ ಚಟುವಟಿಕೆ ಮುಂದುವರೆಸಿದರೆ ತಕ್ಕ ಶಾಸ್ತಿ ಮಾಡುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ ಎಂದು ಡಿ.ಸಿ.ಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ನಗರ ಪೊಲೀಸ್ ಆಯುಕ್ತರ ಸೂಚನೆಯ ಮೇರೆಗೆ ಪಶ್ಚಿಮ ವಿಭಾಗದ ಕಾಟನ್ ಪೇಟೆ , ಚಾಮರಾಜಪೇಟೆ, ಜೆ.ಜೆ ನಗರ, ಕೆ.ಪಿ ಅಗ್ರಹಾರ, ಮಾಗಡಿ ರಸ್ತೆಯ ಪೊಲೀಸರು ಸೇರಿದಂತೆ ವಲಯದ ಸಿಬ್ಬಂದಿ 22 ಕ್ಕೂ ಹೆಚ್ಚು ಡ್ರಗ್ ಪೆಡ್ಲರ್ ಗಳನ್ನೂ ವಶಕ್ಕೆ ಪಡೆದು,180 ಕ್ಕಿಂತ ಜಾಸ್ತಿರೌಡಿಗಳ ಮನೆಗಳ ಮೇಲೆ ದಾಳಿ ನೆಡೆಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಇಬ್ಬರು ಎಸಿಪಿ ಗಳ ನೇತೃತ್ವದಲ್ಲಿ 600 ಕ್ಕೂ ಹೆಚ್ಚು ಸಿಬ್ಬಂದಿಗಳು ಬೆಳಗ್ಗೆ 5 ಗಂಟೆಯಿಂದ ಅಂಜಪ್ಪ ಗಾರ್ಡನ್, ನೇತಾಜಿ ನಗರ , ಗೋಪಾಲಪುರ, ಶ್ಯಾಮಣ್ಣ ಗಾರ್ಡನ್, ಬಾಪೂಜಿ ನಗರ ಸೇರಿದಂತೆ ಹಲವು ಏರಿಯಾಗಳಲ್ಲಿ ಸರ್ಚ್ ಆಪರೇಷನ್ ಕೈಗೊಳ್ಳಲಾಗಿತ್ತು ಎಂದಿದ್ದಾರೆ.
180 ಕ್ಕೂ ಹೆಚ್ಚು ರೌಡಿಗಳನ್ನು ದಾಳಿಯ ನಂತರ ಸಂಭಂದಪ್ಪಟ ಪೊಲೀಸ್ ಠಾಣೆಗೆ ಕರೆತಂದು ರೌಡಿ ಚಟುವಟಿಕೆ ಮುಂದುವರೆಸಬಾರದು, ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳಬಾರದು, ಕಾನೂನಿಗೆ ಭಾಗ ತರುವಂತಹ ಕೆಲಸಗಳನ್ನು ಮಾಡಬಾರದು ಮತ್ತು ಸಮನ್ಸ್ ಬಂದ ತಕ್ಷಣ ಕೋರ್ಟ್ ಗೆ ಹಾಜರಾಗಬೇಕು ಇಲ್ಲದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ವಾರ್ನಿಂಗ್ ಕೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ.
ರೌಡಿಗಳು ಸಂಜದ್ರೋಹದ ಕೆಲಸ ಬಿಟ್ಟು ಮುಖ್ಯವಾಹಿನಿಗೆ ಬಂದು ನೆಮ್ಮದಿಯ ಜೀವನ ನೆಡೆಸುವುದಾದರೆ ಪೊಲೀಸ್ ಸಿಬ್ಬಂದಿ ಎಲ್ಲಾ ರೀತಿಯ ಸಹಕಾರ ನೀಡುತ್ತಾರೆ. ಅಪರಾಧ ಚಟುವಟಿಕೆ ಮುಂದುವರೆಸಿದರೆ ತಕ್ಕ ಪಾಠ ಕಳಿಸುತ್ತಾರೆ ಎಂದಿದ್ದಾರೆ.
ಮೂರು ಬಾರ್ ಗಳ ವಿರುದ್ಧ ಪ್ರಕರಣ:
ಸಿಟಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬೆಳ್ಳಂ ಬೆಳಗ್ಗೆ ಬಾರ್ ಬಾಗಿಲು ತೆರೆದು ಮದ್ಯ ಮಾರಾಟ ಮಾಡುತ್ತಿದ್ದ ಮೂರು ಬಾರ್ ಮಾಲೀಕರಿಗೆ ಎಚ್ಚರಿಕೆ ನೀಡಿ ಪ್ರಕರಣ ದಾಖಲಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ