ನಟ ಪುನೀತ್ ರಾಜ್‍ಕುಮಾರ್ ನಿಧನ ಹಿನ್ನೆಲೆ ಭಾನುವಾರ ಸಂಜೆ 6 ಗಂಟೆಗೆ ರಾಜ್ಯದ 550 ಚಿತ್ರಮಂದಿರಗಳಲ್ಲಿ ಪುಷ್ಪಾಂಜಲಿ, ದೀಪಾಂಜಲಿ ಹಾಗೂ ಭಾಷ್ಪಾಂಜಲಿ ಜರುಗಿದವು.
ನಟ ಪುನೀತ್ ರಾಜ್‍ಕುಮಾರ್ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳ ಬಳಗ ಹೊಂದಿದ್ದು, ತಮ್ಮ ನೆಚ್ಚಿನ ನಟನ ಅಗಲಿಕೆಯಿಂದ ಸುಮಾರು 11 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಚಿತ್ರರಂಗದ ಮೇರು ನಟನ ಅಂತಿಮ ದರ್ಶನವನ್ನು ಸುಮಾರು 25 ಲಕ್ಷ ಅಭಿಮಾನಿಗಳು ಕಣ್ತುಂಬಿಕೊಂಡಿದ್ದರು. ಚಿತ್ರ ವಿತರಕ ಮತ್ತು ಪ್ರದರ್ಶಕರು ಶ್ರದ್ಧಾಂಜಲಿ ಸಲ್ಲಿಸಲು ರಾಜ್ಯದ ಎಲ್ಲಾ ಸಿನಿಮಾ ಥಿಯೇಟರ್ ಗಳಲ್ಲಿ ಮೇಣದ ಬತ್ತಿ ಹಿಡಿದು ದೀಪಾಂಜಲಿ, ಪುನೀತ್ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿದರು.
ಕಂಠೀರವ ಸ್ಟೂಡಿಯೋದತ್ತ ಹರಿದು ಬರ್ತಿವ ಜನ ಸಾಗರ:
ವಾರಾಂತ್ಯ ದಿನಗಳು ಇರುವುದರಿಂದ ನಟ ಪುನೀತ್ ಸಮಾಧಿಗೆ ಜನಸಾಗರವೇ ಹರಿದು ಬಂದಿದೆ. ಭಾನುವಾರ ಒಂದೇ ದಿನ 15 ಸಾವಿರಕ್ಕೂ ಹೆಚ್ಚು ಜನರು ಕಂಠೀರವ ಸ್ಟೂಡಿಯೋಗೆ ಬಂದು ಅಪ್ಪು ಸಮಾಧಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಬೆಳಗ್ಗೆ 9ರಿಂದ ಸಂಜೆ 6 ಗಂಟೆ ವರೆಗೆ ಅಂತಿಮ ದರ್ಶನವಿದ್ದು, ಭಾನುವಾರ ಸಂಜೆ 7 ಗಂಟೆವರೆಗೆ ಅವಕಾಶ ನೀಡಲಾಗಿತ್ತು.
ಪುಣ್ಯಸ್ಮರಣೆ ಕಾರ್ಯಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ:
ಸೋಮವಾರ ಪುಣ್ಯಸ್ಮರಣೆ ಕಾರ್ಯಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ. ಅಪ್ಪು ಕುಟುಂಬ ಸದಸ್ಯರು ನಾಳೆ ಬೆಳಗ್ಗೆ 11 ಗಂಟೆಗೆ ಬರುವ ಸಾಧ್ಯತೆ ಇದ್ದು, ಅಪ್ಪು ಕುಟುಂಬ ಸದಸ್ಯರು ಸಮಾಧಿ ದರ್ಶನ ಬಳಿಕ ಸಾರ್ವಜನಿಕರಿಗೆ ಅವಕಾಶ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ನುಡಿನಮನದ ಹೆಸರಲ್ಲಿ ಚಂದಾ ವಸೂಲಿ?:
ಪುನೀತ್ ನುಡಿನಮನದ ಹೆಸರಲ್ಲಿ ಚಂದಾ ವಸೂಲಿ ಮಾಡಲಾಗುತ್ತಿದೆ ಎನ್ನುವ ಆರೋಪಕ್ಕೆ ಚಲನಚಿತ್ರ ಮಂಡಳಿ ಗುರಿಯಾಗುತ್ತಿದ್ದೆ. ನ. 16 ರಂದು ನಡೆಯಲಿರುವ ಪುನೀತ ನಮನ ಕಾರ್ಯಕ್ರಮದ ಹೆಸರಲ್ಲಿ ಚಂದಾ ವಸೂಲಿ ಮಾಡುತ್ತಿದ್ದು, ಚೆಕ್ ಪಡೆದು, ವೈಯಕ್ತಿಕ ಅಕೌಂಟ್ಗೆ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ.
ಸಿನಿಮಾ ನಿರ್ದೇಶಕ ಜೆ.ಜೆ. ಶ್ರೀನಿವಾಸ್, ಕುಮಾರ್ ಸೇರಿದಂತೆ ಹಲವು ಫಿಲ್ಮ್ ಚೇಂಬರ್ ಸದಸ್ಯರು ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.