ಲೋಕೋಪಯೋಗಿ ಇಲಾಖೆಯ ಕಲಬುರ್ಗಿ ಹಾಗೂ ಬಳ್ಳಾರಿಯ ಮುಖ್ಯ ಇಂಜಿನಿಯರ ವ್ಯಾಪ್ತಿಯ ಈಶಾನ್ಯ ವಲಯಕ್ಕೆ ಪ್ರಸಕ್ತ ವರ್ಷ 1981 ಕೋಟಿ ರೂ.ಗಳನ್ನು ಕಾಮಗಾರಿಗಳಿಗಾಗಿ ನೀಡಲಾಗಿದೆ ಎಂದು ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಚ್.ಡಿ. ರೇವಣ್ಣ ತಿಳಿಸಿದ್ದಾರೆ.
ಕಲಬುರಗಿಯ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರರ ಕಚೇರಿ ಸಭಾಂಗಣದಲ್ಲಿ ಈಶಾನ್ಯ ವಲಯದ ಕಲಬುರಗಿ ವೃತ್ತದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದೇ ವರ್ಷಕ್ಕೆ 1981 ಕೋಟಿ ರೂ. ಅನುದಾನ ನೀಡಿರುವುದು ಐತಿಹಾಸಿಕವಾಗಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಸರ್ಕಾರಕ್ಕೆ ಒಳ್ಳೆಯ ಹೆಸರು ತರುವಲ್ಲಿ ಎಲ್ಲ ಅಧಿಕಾರಿಗಳು ಪ್ರಯತ್ನಿಸಬೇಕು ಎಂದರು.
ಕಲಬುರ್ಗಿ ವೃತ್ತಕ್ಕೆ ನೀಡಿರುವ 1981 ಕೋಟಿ ರೂ.ಗಳ ಅನುದಾನಕ್ಕೆ 4902 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಪೈಕಿ 4897 ಕಾಮಗಾರಿಗಳಿಗೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, 4473 ಕಾಮಗಾರಿಗಳಿಗೆ ಕಾರ್ಯಾದೇಶ ಸಹ ನೀಡಲಾಗಿದೆ. ಬಾಕಿ ಕಾಮಗಾರಿಗಳಿಗೆ ಆದಷ್ಟು ಬೇಗ ಟೆಂಡರ ಕರೆದು ಪ್ರಾರಂಭಿಸಬೇಕು. ಫೆಬ್ರವರಿ ಅಂತ್ಯದೊಳಗಾಗಿ ಬಾಕಿ ಇರುವ ಎಲ್ಲ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿ ಪ್ರಾರಂಭಿಸಬೇಕು ಎಂದು ಸೂಚಿಸಿದರು.