ಬಳ್ಳಾರಿ : ಜಿಲ್ಲೆಯಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ನಗರಸಭೆ ಸದಸ್ಯೆ ಜಿ. ಪದ್ಮಾವತಿ ಯಾದವ್ ಕೊಲೆ ಪ್ರಕರಣ ಸಂಭವಿಸಿ 12 ವರ್ಷಗಳಾದರೂ ಆರೋಪಿಗಳು ಪತ್ತೆಯಾಗಿಲ್ಲ.
ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ಅರ್ಜಿ ಹೈಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದ್ದರೆ, ಇನ್ನೊಂದೆಡೆ ದೂರುದಾರರು ಕೇಂದ್ರ ಸರಕಾರಕ್ಕೂ ಮನವಿ ಸಲ್ಲಿಸಲು ಮುಂದಾಗಿರುವುದು ಸಂಚಲನ ಮೂಡಿಸಿದೆ.
2010 ಫೆಬ್ರುವರಿ 04ರಂದು ಪದ್ಮಾವತಿ ಅವರ ಕೊಲೆಯಾಗಿತ್ತು. ಸದ್ಯ ಈ ಪ್ರಕರಣ ನಡೆದು 12 ವರ್ಷಗಳು ಕಳೆದಿದ್ದರೂ ಈವರೆಗೂ ಆರೋಪಿಗಳು ಪತ್ತೆಯಾಗಿಲ್ಲ. ಪ್ರಕರಣದ ತನಿಖೆ ಸಮರ್ಪಕವಾಗಿ ನಡೆಸಲು ಸಿಬಿಐಗೆ ವಹಿಸುವಂತೆ ಮೃತ ಪದ್ಮಾವತಿ ಯಾದವ್ ಅವರ ಸಹೋದರ ಸುಬ್ಬರಾಯುಡು, ಧಾರವಾಡ ಹೈಕೋಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಇದರೊಂದಿಗೆ 2020ರ ಡಿಸೆಂಬರ್ 01ರಂದು ಬೆಂಗಳೂರಿನ ಮುಖ್ಯಮಂತ್ರಿ ಕಚೇರಿ, ಗೃಹ ಇಲಾಖೆ ಕಾರ್ಯದರ್ಶಿ, ಗೃಹ ಸಚಿವರ ಕಚೇರಿಗೂ ತೆರಳಿ ಮನವಿ ಸಲ್ಲಿಸಿದ್ದಾರೆ. ಮನವಿಗೆ ಸ್ಪಂದಿಸಿರುವ ಸರಕಾರ, ಪ್ರಕರಣವನ್ನು ಸಿಬಿಐಗೆ ವಹಿಸುವ ಸಂಬಂಧ ಮಾಹಿತಿ ಸಲ್ಲಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದೆ.