ಮಂಗಳೂರು ನಗರ ಪೊಲೀಸ್ ಅಧಿಕಾರಿಗಳಿಂದ ತುರ್ತು ಸ್ಪಂದನ ಬೆಂಬಲ ವ್ಯವಸ್ಥೆ 112 ಸಹಾಯವಾಣಿ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಇಂದು ದಿನವಿಡೀ ಆಯೋಜಿಸಲಾಗಿರುವ ಮಹಿಳಾ ಸುರಕ್ಷತೆಗಾಗಿ ಒಂದು ದಿನ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ಇದೇ ವೇಳೆ ಮಾತನಾಡಿ
ದ ಒಲಿಂಪಿಯನ್, ಅರ್ಜುನ ಪ್ರಶಸ್ತಿ ಪುರಸ್ಕೃತೆ ಎಂ.ಆರ್. ಪೂವಮ್ಮ, ಮಂಗಳೂರು ನಗರ ಪೊಲೀಸರು ಆಯೋಜಿಸಿರುವ ಮಹಿಳಾ ಸುರಕ್ಷತೆಗಾಗಿ ಒಂದು ದಿನ ಕಾರ್ಯಕ್ರಮ ಮಹಿಳೆಯರಲ್ಲಿ ಧೈರ್ಯ ತುಂಬುವ ಪ್ರಕ್ರಿಯೆಯಾಗಿದೆ ಎಂದರು.
ಇದೇ ವೇಳೆ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಯಾವುದೇ ತುರ್ತು ಸಂದರ್ಭದಲ್ಲಿ ಮಹಿಳೆಯರಾಗಲಿ ಅಥವಾ ಇತರ ಯಾರೇ ಆಗಲಿ 112 ಗೆ ಕರೆ ಮಾಡಿದಾಗ ನಗರ ವ್ಯಾಪ್ತಿಯಲ್ಲಿ ಸ್ಥಳೀಯ ಠಾಣೆಯ ಪೊಲೀಸರು 5ರಿಂದ 10 ನಿಮಿಷಗಳಲ್ಲಿ ಹಾಗೂ ಹೊರವಲಯದಲ್ಲಾದರೆ 15 ನಿಮಿಷಗಳೊಳಗೆ ಘಟನಾ ಸ್ಥಳಕ್ಕೆ ಆಗಮಿಸಿ ಸಮಸ್ಯೆ ನಿವಾರಿಸಲಿದ್ದಾರೆ ಎಂದರು.
ಇದೇ ವೇಳೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಒಲಿಂಪಿಯನ್ ಪೂವಮ್ಮ ಹಾಗೂ ಅವರ ತಾಯಿ ಜಾನಕಿ ಉಪಸ್ಥಿತಿಯಲ್ಲಿ ನಗರದ ಅಥೆನಾ ಆಸ್ಪತ್ರೆಯಲ್ಲಿ ಇಆರ್‌ಎಸ್‌ಎಸ್- 112 ಸಹಾಯವಾಣಿ ಕಾರ್ಯಾಚರಣೆ ಕುರಿತು ಅಣುಕು ಪ್ರದರ್ಶನ ನಡೆಯಿತು.
ಈ ಸಂದರ್ಭ ಅಥೆನಾ ಆಸ್ಪತ್ರೆಯ ಹಿರಿಯ ಸಿಬ್ಬಂದಿ 112 ಗೆ ಕರೆ ಮಾಡುವ ಮೂಲಕ ಪೊಲೀಸರ ಕಾರ್ಯಾಚರಣೆಯ ಕ್ಷಿಪ್ರತೆ ಬಗ್ಗೆ ಅಣುಕು ಪ್ರದರ್ಶನ ನಡೆಸಲಾಯಿತು. ಈ ವೇಳೆ ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.