ದುಬೈನಿಂದ ಬಂದಿದ್ದ ಇಂಡಿಗೋ ವಿಮಾನದ ಸೀಟ್ ಕೆಳಗಡೆ ಬಚ್ಚಿಡಲಾಗಿದ್ದ ರೂ. 1.38,60,000 ಮೌಲ್ಯದ 2.8 ಕೆಜಿ ತೂಕದ ಚಿನ್ನದ ನಾಣ್ಯ ಅಥವಾ ಬಾರ್ ಗಳನ್ನು ಬೆಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಮಂಗಳವಾರ ವಶಕ್ಕೆ ಪಡೆದಿದ್ದಾರೆ.
ಮಂಗಳವಾರ ಬೆಳಗ್ಗೆ 10-30ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಂದು ತಲುಪಿದ ನಂಬರ್- 6E 096 ವಿಮಾನದಲ್ಲಿ ಬೃಹತ್ ಪ್ರಮಾಣದ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ವಿಮಾನದ ಸೀಟಿನ ಕೆಳಗಡೆ ಬಚ್ಚಿಡ್ಡಲಾಗಿದ್ದ 24 ಚಿನ್ನದ ಬಾರ್ ಗಳನ್ನು ವಶಕ್ಕೆ ಪಡೆದಿರುವುದಾಗಿ ಕಸ್ಟಮ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಲ್ಲಾ ಪ್ರಯಾಣಿಕರು ವಿಮಾನದಿಂದ ಇಳಿದ ನಂತರ ಸಣ್ಣ ಸುಳಿವಿನ ಆಧಾರದ ಮೇಲೆ ತಪಾಸಣೆ ನಡೆಸಿದಾಗ ಬೂದೂ ಬಣ್ಣದ ಚೀಲವೊಂದರಲ್ಲಿ ಅವುಗಳನ್ನು ಸುತ್ತಿಡಲಾಗಿತ್ತು. ಇವುಗಳನ್ನು ಯಾರು ಸಾಗಾಟ ಮಾಡುತ್ತಿದ್ದ ಪ್ರಯಾಣಿಕರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಅವರು ಹೇಳಿದರು.
ವಿಮಾನ ನಿಲ್ದಾಣದಲ್ಲಿ ಆಗಾಗ್ಗೆ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಕಸ್ಟಮ್ಸ್ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.