ಹೆದ್ದಾರಿ ರಸ್ತೆಯನ್ನು ದಾಟುವಾಗ ವೇಗವಾಗಿ ಬಂದ ಬಿಬಿಎಂಪಿ ಕಸದ ಲಾರಿಗೆ (BBMP Lorry) ಸಿಕ್ಕಿ ಬಾಲಕಿಯೊಬ್ಬಳು (girl) ಅಸುನೀಗಿದ್ದಾಳೆ. ಇಂದು ಮಧ್ಯಾಹ್ನ ಒಂದು ಗಂಟೆ ವೇಳೆಗೆ ಈ ದುರ್ಘಟನೆ ನಡೆದಿದೆ (death). ರಸ್ತೆ ದಾಟುತಿದ್ದ ಸುಮಾರು 13 ವರ್ಷದ ಬಾಲಕಿ ಅಕ್ಷಯಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಉಳಿದವರನ್ನು ಪೊಲೀಸರು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಬೈಕ್ ಸವಾರನೊಬ್ಬನಿಗೆ ಗಂಭೀರ ಗಾಯಗಳಾಗಿವೆ. ಹೆಬ್ಬಾಳ ಪೊಲೀಸ್ ಠಾಣೆಯ ಮುಂಭಾಗ ಘಟನೆ ನಡೆದಿದ್ದು, ಆರ್ ಟಿ ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು, ಬಿಬಿಎಂಪಿ ಕಸದ ಲಾರಿ ಚಾಲಕ ಮಂಜುನಾಥನನ್ನು ಆರ್.ಟಿ. ನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಅಂಡರ್ಪಾಸ್ನಲ್ಲಿ ನೀರು ತೆಗೆದಿದ್ದರೇ ನನ್ನ ಪುತ್ರಿ ಸಾಯುತ್ತಿರಲಿಲ್ಲ:
ಅಕ್ಷಯಾಳ ತಂದೆ ನರಸಿಂಹಮೂರ್ತಿ ಬಿಎಂಟಿಸಿ ನಲ್ಲಿ ಡ್ರೈವರ್ ಕಂ ಕಂಡಕ್ಟರ್ ಆಗಿದ್ದಾರೆ. ಅವರಿಗೆ ಮೂರು ಜನ ಮಕ್ಕಳು, ಇಬ್ಬರು ಹೆಣ್ಣು ಮತ್ತು ಒಂದು ಗಂಡು ಮಗು ಇದೆ. ಮೃತ ಅಕ್ಷಯಾ ದೊಡ್ಡ ಮಗಳು, ನರಸಿಂಹಮೂರ್ತಿ ಅವರ ಪತ್ನಿ ಹೌಸ್ ವೈಫ್.
ಹೇಗಾಯಿತು ದುರ್ಘಟನೆ:
ಅಂಡರ್ ಪಾಸ್ ಇದ್ದರೂ ಬಳಸದೇ ರಸ್ತೆ ದಾಟಲು ಓರ್ವ ಮಹಿಳೆ ಮತ್ತು ಬಾಲಕಿ ಸೇರಿ ಮೂವರು ಮುಂದಾಗಿದ್ದರು. ಈ ವೇಳೆ ಮುಂದೆ ಬಂದ ಬೈಕ್ ಮತ್ತು ಕಾರ್ ಗಳನ್ನು ನಿಲ್ಲಿಸಿದ್ದರು. ಆದರೆ ಅದರ ಹಿಂಬದಿಯಲ್ಲಿ ವೇಗವಾಗಿ ಬರುತಿದ್ದ ಬಿಬಿಎಂಪಿ ಲಾರಿ ಡಿಕ್ಕಿ ಹೊಡೆದು ಅನಾಹುತ ಸಂಭವಿಸಿದೆ. ಮತ್ತೋರ್ವ ಪಾದಚಾರಿ ಸೌಮ್ಯ (28) ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳು ಬೈಕ್ ಸವಾರ ವಿಕಾಸ್ (40) ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಬಾಲಕಿ ಅಕ್ಷಯಾಳ ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಅಂಡರ್ ಪಾಸ್ ನಲ್ಲಿ ನೀರು ನಿಂತಿತ್ತು. ಹಾಗಾಗಿ…
ಮಳೆ ನೀರಿನಿಂದ ಅಂಡರ್ ಪಾಸ್ ನಲ್ಲಿ ನೀರು ನಿಂತಿತ್ತು. ಹಾಗಾಗಿ ಜನರಿಗೆ ಅಂಡರ್ ಪಾಸ್ ಬಳಸುವುದು ಸಾಧ್ಯವಾಗುತ್ತಿರಲಿಲ್ಲ. ಅನಿವಾರ್ಯವಾಗಿ ಹೆದ್ದಾರಿ ರಸ್ತೆ ಮೇಲೆಯೆ ನಡೆದಾಡುತ್ತಿದ್ದಾರೆ. ಈ ವೇಳೆ ಈ ದಾರುಣ ಘಟನೆ ನಡೆದಿದೆ.
ಬುದ್ಧಿ ಕಲಿಯದ ಬಿಬಿಎಂಪಿ ಅಧಿಕಾರಿಗಳು, ಬ್ಲೇಮ್ ಗೇಮ್:
ಇತ್ತೀಚೆಗೆ ರಸ್ತೆ ಗುಂಡಿಗೆ ಒಬ್ಬರು ಬಲಿಯಾಗಿದ್ದರು. ಆ ವರದಿ ಪ್ರಸಾರವಾಗುತ್ತಿದ್ದಂತೆ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ, ತರಾತುರಿಯಲ್ಲಿ ಗುಂಡಿ ಮುಚ್ಚಿ, ಆ ಗುಂಡಿ ತೆಗೆದಿದ್ದು ನಾವಲ್ಲ, ಜಲಮಂಡಳಿ ಎಂದು ಸಬೂಬು ಹೇಳಿ ಜಾರಿಕೊಂಡಿತ್ತು. ಆದರೆ ಅಷ್ಟೊತ್ತಿಗೆ ಒಂದು ಪ್ರಾಣ ಹೋಗಿತ್ತು. ಆ ಪ್ರಕರಣದಲ್ಲಿ ಮುಂದೆ ಜಲಮಂಡಳಿಯವರು ಆ ಗುಂಡಿ ತೋಡಿದ್ದು ನಾವಲ್ಲ; ಆ ರಸ್ತೆಯಲ್ಲಿ ನಾವೂ ಯಾವುದೇ ಕಾಮಗಾರಿ ನಡೆಸಿಯೇ ಇಲ್ಲ ಎಂದು ಸ್ಪಷ್ಟಪಡಿಸಿತ್ತು. ಅಲ್ಲಿಗೆ ಬ್ಲೇಮ್ ಗೇಮ್ ಗುಂಡಿಯನ್ನು ಬಿಬಿಎಂಪಿ ತನ್ನ ಮೇಲೆಯೆ ತೋಡಿಕೊಂಡಿತ್ತು.
ಈ ಪ್ರಕರಣದಲ್ಲೂ ಅದೇ ರೀತಿ ಬಾಲಕಿಯ ಸಾವಿನ ಬಳಿಕ ಅಂಡರ್ ಪಾಸ್ ಕ್ಲೀನ್ ಗೆ ಬಿಬಿಎಂಪಿ ಸಿಬ್ಬಂದಿ ಮುಂದಾಗಿದ್ದಾರೆ. ನಿಂತಿದ್ದ ನೀರನ್ನು ಹೊರ ಹಾಕುತ್ತಿದ್ದಾರೆ. ಅದರೊಂದಿಗೆ ಸಾವಿನ ಬಳಿಕವಾದರೂ ಜನ ಸರಾಗವಾಗಿ ಅಂಡರ್ ಪಾಸ್ ಮೂಲಕ ರಸ್ತೆ ದಾಟಲಿ ಎಂಬ ಸದಾಶಯ ಬಿಬಿಎಂಪಿ ಅಧಿಕಾರಿಗಳದ್ದಾಗಿದೆ!
ಪೊಲೀಸರೇ ದೂರು ನೀಡಿದ್ದರೂ ಬಿಬಿಎಂಪಿ ಕಂಟ್ರೂಲ್ ರೂಂ ಡೋಂಟ್ ಕೇರ್!
ಬಿಬಿಎಂಪಿ ಕ್ರಮ ಕೈಗೊಳ್ಳದ ಹಿನ್ನೆಲೆ ಘಟನೆ ನಡೆದಿದೆ ಎಂದು ಉತ್ತರ ವಿಭಾಗ ಸಂಚಾರಿ ಡಿಸಿಪಿ ಸವಿತಾ ಎಸ್ ಹೇಳಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಸಬ್ ವೇ ಸಮಸ್ಯೆ ಲಾ ಅಂಡ್ ಆರ್ಡರ್ ಪೊಲೀಸರ ಗಮನಕ್ಕೆ ಬಂದಿತ್ತು. ಪಾಯಿಂಟ್ ಡ್ಯೂಟಿನಲ್ಲಿದ್ದವರು ಸಬ್ ವೇನಲ್ಲಿ ನೀರು ತುಂಬಿದೆ ಅಂತಾ ಮಾಹಿತಿ ನೀಡಿದ್ದರು. ಬೆಳಗ್ಗೆನೇ ಬಿಬಿಎಂಪಿ ಕಂಟ್ರೂಲ್ ರೂಂಗೆ ಕಾಲ್ ಮಾಡಿ ದೂರು ನೀಡಿದ್ದಾರೆ. ಆದರೂ ಬಿಬಿಎಂಪಿ ಕ್ರಮ ಕೈಗೊಂಡಿಲ್ಲ. ಮಧ್ಯಾಹ್ನ ನಾಲ್ಕು ಜನ ರಸ್ತೆ ಕ್ರಾಸ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಕಸದ ಗಾಡಿ ಡಿಕ್ಕಿ ಹೊಡೆದಿದೆ. ಬಾಲಕಿ ಆಸ್ಪತ್ರೆಗೆ ದಾಖಲಿಸುವ ವೇಳೆ ಸಾವನಪ್ಪಿದ್ದಾಳೆ. ಬಾಲಕಿ ಸದಾಶಿವನಗರದ ಖಾಸಗಿ ಶಾಲೆಯಲ್ಲಿ 9 ನೇ ತರಗತಿ ಓದುತಿದ್ದಳು ಎಂದು ಅವರು ವಿವರಿಸಿದ್ದಾರೆ.
ಕಳೆದ ವರ್ಷ ರಸ್ತೆ ಗುಂಡಿಗೆ ಬಿದ್ದು 6 ಜನ ಸಾವು:
ಕಳೆದ ವರ್ಷ ರಸ್ತೆ ಗುಂಡಿಗೆ ಬಿದ್ದು 6 ಜನ ಸಾವನ್ನಪ್ಪಿದ್ದಾರೆ. ರಸ್ತೆಗಳ ಅಸಮರ್ಪಕ ನಿರ್ವಹಣೆಯಿಂದ ಇಂತಹ ರಸ್ತೆ ಅಪಘಾತಗಳು, ಸಾವುಗಳು ಸಂಭವಿಸಿವೆ. ಬೆಂಗಳೂರಿನಲ್ಲಿ ಕಳೆದ 3 ವರ್ಷದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಏರಿಕೆಯಾಗಿದೆ.
2019 ರಲ್ಲಿ 810 ರಸ್ತೆ ಅಪಘಾತಗಳು ಸಂಭವಿಸಿದ್ದು ಇದರಲ್ಲಿ 832 ಮಂದಿ ಸಾವಿಗೀಡಾಗಿದ್ದರು. 2020 ರಲ್ಲಿ 632 ರಸ್ತೆ ಅಪಘಾತ 657 ಮಂದಿ ಸಾವನ್ನಪ್ಪಿದ್ದರು. 2021 ರಲ್ಲಿ 618 ರಸ್ತೆ ಅಪಘಾತ ನಡೆದು, 651 ಮಂದಿ ಮೃತಪಟ್ಟಿದ್ದರು. ಇನ್ನು, ಕಳೆದ ವರ್ಷ ರಸ್ತೆ ಗುಂಡಿಗೆ ಬಿದ್ದು ಆರು ಮಂದಿ ಅಸುನೀಗಿದ್ದರು.