ನವದೆಹಲಿ: ಭಾರತೀಯ ಸಿನಿಮಾ ಸಾಧಕರಿಗೆ ನೀಡಲಾಗುವ ಅತ್ಯುನ್ನತ ದಾದಾಸಾಹೇಬ್ ಪ್ರಶಸ್ತಿಗೆ ಸೂಪರ್ ಸ್ಟಾರ್ ರಜನೀಕಾಂತ್ ರನ್ನು ಆಯ್ಕೆ ಮಾಡಿದ ಸಮಿತಿಯಲ್ಲಿ ಯಾರ್ಯಾರು ಇದ್ದರು ಗೊತ್ತೇ?
ಕೇಂದ್ರ ಸರ್ಕಾರ ನಿನ್ನೆ ರಜನಿ ಭಾರತೀಯ ಸಿನಿಮಾಗೆ ನೀಡಿದ ಕೊಡುಗೆ ಗಮನಿಸಿ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸುವ ವಿಚಾರ ಪ್ರಕಟಿಸಿತ್ತು. ಬಳಿಕ ಪ್ರಧಾನಿ ಮೋದಿ ರಜನೀಕಾಂತ್ ರನ್ನು ಟ್ವಿಟರ್ ಮೂಲಕ ಅಭಿನಂದಿಸಿದ್ದರು. ರಜನಿ ಕೂಡಾ ಟ್ವೀಟ್ ಮೂಲಕ ತಮಗೆ ಪ್ರಶಸ್ತಿ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದರು.
ಅಷ್ಟಕ್ಕೂ ರಜನಿಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ ಸಮಿತಿಯಲ್ಲಿ ಇದ್ದ ಘಟಾನುಘಟಿಗಳು ಯಾರೆಲ್ಲಾ ಗೊತ್ತಾ? ಈ ಪ್ರಶಸ್ತಿಗೆ ರಜನಿಯನ್ನು ಆಯ್ಕೆ ಮಾಡಿದ ಜ್ಯೂರಿ ಸದಸ್ಯರೆಂದರೆ, ಹಿರಿಯ ಗಾಯಕಿ ಆಶಾ ಭೋಂಸ್ಲೆ, ಸೂಪರ್ ಸ್ಟಾರ್ ಮೋಹನ್ ಲಾಲ್, ಬಾಲಿವುಡ್ ನಿರ್ದೇಶಕ ಸುಭಾಷ್ ಘಾಯ್, ಬಿಸ್ವಜಿತ್ ಚ್ಯಾಟರ್ಜಿ ಮತ್ತು ಗಾಯಕ ಶಂಕರ್ ಮಹದೇವನ್. ಈ ಘಟಾನುಘಟಿಗಳ ಸಮಿತಿ ಪ್ರಶಸ್ತಿಗೆ ರಜನಿ ಹೆಸರನ್ನು ಶಿಫಾರಸ್ಸು ಮಾಡಿತ್ತು. ಅದನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ.