ಭಾರತೀಯ ಅಧ್ಯಾತ್ಮ ಪರಂಪರೆಯಲ್ಲಿ ಸನ್ಯಾಸಕ್ಕೆ ಮಹತ್ವದ ಸ್ಥಾನಮಾನಗಳಿದ್ದಾವೆ. ಆದರೆ ಇತ್ತೀಚಿನ ದಿನಗಳಲ್ಲಿ ಕಾವಿಯ ಘನತೆ ಗೌರವಕ್ಕೆ ಕುಂದುಂಟು ಮಾಡುವಂಥಾ ಕೆಲ ವಿದ್ಯಮಾನಗಳು ಎಗ್ಗಿಲ್ಲದೆ ನಡೆಯುತ್ತಿವೆ. ಕೆಲ ಕಳ್ಳ ಸನ್ಯಾಸಿಗಳು ಮುಗ್ಧ ಜನರನ್ನು ಯಾಮಾರಿಸುತ್ತಾ ಮುಂದುವರೆಯುತ್ತಿದ್ದರೆ, ಇತ್ತ ಪ್ರಜ್ಞಾವಂತರ ಖಾವಿಯತ್ತ ಅನುಮಾನದ ಕಣ್ಣಟಿಟ್ಟು ಕೂರುವಂತಾಗಿದೆ.
ಈ ಮನಸ್ಥಿತಿಯಿಂದಲೇ ಕಾವಿಯೊಳಗೆ ಅವಿತಿರುವ ಕಳ್ಳ ಕಾಕರು ಅಡಿಗಡಿಗೆ ಬೆತ್ತಲಾಗುತ್ತಿದ್ದಾರೆ. ಈ ವಾರ ತೆರೆಗಾಣಲಿರುವ ವೇಷಧಾರಿ ಚಿತ್ರ ಕೂಡಾ ಇಂಥಾ ಮುಖವಾಡವನ್ನು ಕಳಚಿ ಬಿಸಾಡಲಿದೆಯಾ ಎಂಬೊಂದು ಕುತೂಹಲ ಎಲ್ಲರಲ್ಲಿಯೂ ಇದೆ.
ಸನ್ಯಾಸಿಗಳಾದವರು ನಿಜಕ್ಕೂ ಅರಿಷಡ್ವರ್ಗಗಳನ್ನು ನಿಗ್ರಹಿಸಿಕೊಂಡು ಬದುಕಲು ಸಾಧ್ಯವಾ ಎಂಬೊಂದು ಅನುಮಾನ ಎಲ್ಲರನ್ನೂ ಕಾಡುತ್ತಿರುತ್ತದೆ. ಈ ಚಿತ್ರದ ನಾಯಕ ದುಡ್ಡು ಮಾಡೋದೇ ಬದುಕಲ್ಲ ಎಂಬ ತೀರ್ಮಾನಕ್ಕೆ ಬಂದು ತಾನೇ ಸನ್ಯಾಸದ ಪ್ರಯೋಗಕ್ಕೆ ಮುಂದಾಗುವ ಕಥಾ ಹಂದರವನ್ನು ಈ ಸಿನಿಮಾ ಒಳಗೊಂಡಿದೆ. ಮೂಲತಃ ಪತ್ರಕರ್ತರೂ ಆಗಿರುವ ಶಿವಾನಂದ ಭೂಶಿ ತಾವೇ ಕಂಡುಂಡ ಘಟನೆಗಳನ್ನು ಆಧರಿಸಿ ವೇಷಧಾರಿ ಎಂಬ ಕಾದಂಬರಿ ಬರೆದಿದ್ದರಂತೆ. ಅದನ್ನೇ ಅವರೀಗ ದೃಷ್ಯ ರೂಪಕ್ಕಿಳಿಸಿದ್ದಾರೆ.
ಆರ್ಯನ್ ಇಲ್ಲಿ ನಾಯಕನಾಗಿ ವೇಷಧಾರಿಯಾಗಿಯೂ ಬಣ್ಣ ಹಚ್ಚಿದ್ದಾರೆ. ಅವರಿಗಿಲ್ಲಿ ಮೂವರು ನಾಯಕಿಯರು ಜೊತೆಯಾಗಿದ್ದಾರೆ. ಈ ಮುಖವಾಡದ ಕಥೆ ಎಂಬುದು ಗಂಭೀರವಾಗಿರುವಂತೆ ಯಾರಿಗಾದರೂ ಅನ್ನಿಸಬಹುದು. ಕಥೆ ಗಂಭೀರವಾದ ವಸ್ತುವನ್ನೊಳಗೊಂಡಿರೋದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ಮನೋರಂಜನೆಯನ್ನೇ ಪ್ರಧಾನವಾಗಿಟ್ಟುಕೊಂಡು ಶಿವಾನಂದ ಭೂಶಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರಂತೆ. ಇದರ ಅಸಲೀ ಹೂರಣ ಈ ವಾರವೇ ಜಾಹೀರುಗೊಳ್ಳಲಿದೆ.