ದೂರದೂರಿನ ಪಯಣ, ಚಲಿಸುತ್ತಲೇ ಬಿಚ್ಚಿಕೊಳ್ಳುವ ಕಥೆ ಹೊಂದಿರೋ ಜರ್ನಿ ಬೇಸಿನ ಸಿನಿಮಾಗಳ ಬಗ್ಗೆ ಪ್ರೇಕ್ಷಕರಲ್ಲೊಂದು ಕುತೂಹಲ ಇದ್ದೇ ಇರುತ್ತದೆ. ಆದ್ದರಿಂದಲೇ ಈ ವೆರೈಟಿಯ ಅದೆಷ್ಟೇ ಚಿತ್ರಗಳ ಬಂದರೂ ಪ್ರೇಕ್ಷಕರ ಕುತೂಹಲ ತಣಿಯುವುದೇ ಇಲ್ಲ. ಇದೀಗ ಇಂಥಾದ್ದೇ ಪಯಣದ ಕಥೆ ಹೊಂದಿರೋವ ಭಿನ್ನ ಬಗೆಯ ಪಯಣಿಗರು ಎಂಬ ಚಿತ್ರ ಬಿಡುಗಡೆಗೆ ತಯಾರಾಗಿದೆ.
ರಾಜ್ ಗೋಪಿ ನಿರ್ದೇಶನ ಮಾಡಿರೋ ಪಯಣಿಗರು ಚಿತ್ರ ಕೊಳನ್ ಕಲ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿದೆ. ಯುವ ಸಮುದಾಯದ ವೀಕೆಂಡ್ ಮೋಜು, ಟ್ರಿಪ್ಪುಗಳೇ ಇಂಥಾ ಜರ್ನಿ ಕಥೆಯ ವಸ್ತುವಾಗೋದು ಮಾಮೂಲು. ಆದರೆ ಪಯಣಿಗರು ಚಿತ್ರದಲ್ಲಿ ಪಯಣ ಹೊರಡುವವರು ಸಂಸಾರದ ನೊಗ ಹೊತ್ತ ನಡುವಯಸ್ಸಿನ ಗೆಳೆಯರು.
ಎಲ್ಲ ಜಂಜಾಟಗಳಿಂದ ತಪ್ಪಿಸಿಕೊಳ್ಳುವ ಇರಾದೆಯೊಂದಿಗೆ ಗೋವಾದತ್ತ ಹೊರಡೋ ಈ ಸ್ನೇಹಿತರು ಆ ಹಾದಿಯಲ್ಲಿ ಏನೇನು ಅನಿರೀಕ್ಷಿತ ಘಟನೆಗಳನ್ನು ಎದುರಿಸುತ್ತಾರೆಂಬುದು ಕಥೆಯ ಹೂರಣ. ಈ ಮೂಲಕವೇ ಬದುಕಿನ ದರ್ಶನ ಮಾಡಿಸಲೂ ನಿರ್ದೇಶಕರು ಮುಂದಾಗಿದ್ದಾರೆ. ಇದೇ ತಿಂಗಳ ಹದಿನೇಳರಂದು ಬಿಡುಗಡೆಯಾಗಲಿರೋ ಈ ಚಿತ್ರ ಭರ್ಜರಿ ಗೆಲುವು ಪಡೆಯೋ ಲಕ್ಷಣಗಳೇ ಹೆಚ್ಚಾಗಿದೆ.
ಬೆಂಗಳೂರಿನಿಂದ ಗೋವಾದತ್ತ ಹೊರಡೋ ಐವರು ನಡುವಯಸ್ಸಿನ ಗೆಳೆಯರ ಸುತ್ತಾ ಈ ಕಥೆ ಸುತ್ತುತ್ತದೆ. ಈ ಐದೂ ಪಾತ್ರಗಳೂ ಕೂಡಾ ಐದು ಥರದ ವ್ಯಕ್ತಿತ್ವಗಳನ್ನು ಹೊಮ್ಮಿಸುತ್ತವೆ. ಈ ಪಯಣದುದ್ದಕ್ಕೂ ನಾನಾ ಅನಿರೀಕ್ಷಿತ ಘಟನೆಗಳು ಎದುರಾಗುತ್ತವೆ. ವಿಶೇಷವೆಂದರೆ ಒಟ್ಟಾರೆಯಾಗಿ ಶೇಖಡಾ ಎಂಬತ್ತರಷ್ಟು ಭಾಗದ ಚಿತ್ರೀಕರಣ ಕಾರೊಳಗೆಯೇ ನಡೆಯುತ್ತದೆ. ಈ ಚಿತ್ರೀಕರಣ ನಡೆಸಲು ನಿರ್ದೇಶಕರು ಸೇರಿದಂತೆ ಇಡೀ ಚಿತ್ರತಂಡ ಪಟ್ಟಿರುವ ಪಾಡು ಅಷ್ಟಿಷ್ಟಲ್ಲ. ಆದರೆ ಅದೆಲ್ಲವೂ ಸಾರ್ಥಕವಾಗುವಂತೆ ಈ ಚಿತ್ರ ಮೂಡಿ ಬಂದಿದೆಯಂತೆ.