Photo Courtesy: Instagram
ಬೆಂಗಳೂರು: ಕನ್ನಡದ ಹೆಮ್ಮೆಯ ಬಹುಭಾಷಾ ಗಾಯಕ ವಿಜಯ್ ಪ್ರಕಾಶ್ ಗೆ ಟೊರೆಂಟೋದಲ್ಲಿ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಲಾಗಿದೆ. ಅವರ ಕಲಾ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.
ಟೊರೆಂಟೋದಲ್ಲಿ ವಿಜಯ್ ಪ್ರಕಾಶ್ ಲೈವ್ ಕಾರ್ಯಕ್ರಮ ಆಯೋಜನೆಯಾಗಿತ್ತು. ಅದರಲ್ಲಿ ಭಾಗಿಯಾಗಿದ್ದ ವೇಳೆ ರಿಚ್ಮಂಡ್ ಗ್ಯಾಬ್ರಿಯಾಲ್ ಯೂನಿವರ್ಸಿಟಿ ಅವರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಿದೆ. ಈ ಖುಷಿ ವಿಚಾರವನ್ನು ಅವರೇ ಖುದ್ದಾಗಿ ಹಂಚಿಕೊಂಡಿದ್ದಾರೆ. ಅವರಿಗೆ ಹಲವರಿಂದ ಅಭಿನಂದನೆಗಳ ಸುರಿಮಳೆಯಾಗಿದೆ.
ವಿಜಯ್ ಪ್ರಕಾಶ್ ಜೊತೆಗೆ ತಮಿಳು ಮೂಲದ ಗಾಯಕ ಶ್ರೀನಿವಾಸನ್ ಗೂ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗಿದೆ. ಇಬ್ಬರನ್ನೂ ಒಂದೇ ವೇದಿಕೆಯಲ್ಲಿ ಸನ್ಮಾನ ಮಾಡಲಾಗಿದೆ. ಈ ಖುಷಿಯ ಕ್ಷಣಗಳನ್ನು ವಿಜಯ್ ಪ್ರಕಾಶ್ ಹಂಚಿಕೊಂಡಿದ್ದು ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ.
ಕವಿತೆ ಕವಿತೆ ಹಾಡಿನ ಮೂಲಕ ಕನ್ನಡಿಗರ ಮನಗೆದ್ದಿದ್ದ ಗಾಯಕ ವಿಜಯ್ ಪ್ರಕಾಶ್ ಇಂದು ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಬಹುಭಾಷೆಗಳಲ್ಲಿ ಅನೇಕ ಹಾಡು ಹಾಡಿ ಕನ್ನಡಕ್ಕೆ ಹೆಮ್ಮೆ ತಂದಿದ್ದಾರೆ. ದೇಶ-ವಿದೇಶಗಳಲ್ಲೂ ಕಾರ್ಯಕ್ರಮ ನೀಡುತ್ತಲೇ ಇರುತ್ತಾರೆ. ಇದು ಅವರ ಕಲಾಸೇವೆಯನ್ನು ಗುರುತಿಸಿ ನೀಡಲಾಗುತ್ತಿರುವ ಮೊದಲ ಗೌರವ ಡಾಕ್ಟರೇಟ್ ಎನ್ನುವುದು ವಿಶೇಷ.