Publish Date: Mon, 07 Mar 2022 (10:33 IST)
Updated Date: Mon, 07 Mar 2022 (10:35 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೊನೆಯ ಸಿನಿಮಾ ಜೇಮ್ಸ್ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರತಂಡ ಪ್ರಚಾರ ನಿಮಿತ್ತ ಪತ್ರಿಕಾಗೋಷ್ಠಿ ಆಯೋಜಿಸಿತ್ತು. ಈ ವೇಳೆ ಮಾತನಾಡುವಾಗ ಶಿವರಾಜ್ ಕುಮಾರ್ ತಮ್ಮನನ್ನು ನೆನೆದು ಕಣ್ಣೀರು ಹಾಕಿದ್ದಾರೆ.
ಜೇಮ್ಸ್ ನಲ್ಲಿ ಪುನೀತ್ ಪಾತ್ರಕ್ಕೆ ಶಿವಣ್ಣ ಡಬ್ ಮಾಡಿದ್ದಾರೆ. ತಮ್ಮನ ಪಾತ್ರಕ್ಕೆ ಡಬ್ ಮಾಡುವಾಗ ಭಯವಾಗುತ್ತಿತ್ತು. ಮೊದಲು ನಿರ್ದೇಶಕ ಚೇತನ್ ಗೆ ನನ್ನ ಧ್ವನಿ ಬೇಡ ಎಂದೇ ಹೇಳಿದ್ದೆ. ಅವನದ್ದೇ ಧ‍್ವನಿ ಬಳಸಲು ನೋಡಿದರು, ಮಿಮಿಕ್ರಿಯವರಿಂದ ಮಾಡಿಸಿ ನೋಡಿದರು. ಹಾಗಿದ್ದರೂ ಯಾಕೋ ಸರಿ ಬರಲಿಲ್ಲ. ಹಾಗಾಗಿ ನಾನು ಸ್ವಲ್ಪ ಟ್ರೈ ಮಾಡಿದ್ದೇನೆ ಎಂದು ಶಿವಣ್ಣ ಹೇಳಿದ್ದಾರೆ.
ಇನ್ನು, ತಮ್ಮನನ್ನು ನೆನೆದು ಭಾವುಕರಾದ ಶಿವಣ್ಣ ಕಳೆದ ನಾಲ್ಕು ತಿಂಗಳಿನಿಂದ ನಗ್ತೀವಿ, ಊಟ ಮಾಡ್ತೀವಿ, ಶೂಟಿಂಗ್ ನಲ್ಲಿ ಭಾಗಿಯಾಗ್ತೀವಿ. ಆದರೆ ಮನಸ್ಸಿನಲ್ಲಿರುವ ನೋವು ಕಡಿಮೆಯಾಗ್ತಿಲ್ಲ. ನೆನೆಸಿಕೊಂಡಾಗಲೆಲ್ಲಾ ನೋವು ಜಾಸ್ತಿಯಾಗುತ್ತದೆ. ಅವನ ಬಗ್ಗೆ ಏನು ಮಾತಾಡಲಿ? ಎಂದು ಕಣ್ಣೀರು ಹಾಕಿದ್ದಾರೆ.