ಹೈದರಾಬಾದ್: ತೆಲಂಗಾಣದಲ್ಲಿ ಈಗ ಫೋನ್ ಟ್ಯಾಪಿಂಗ್ ವಿವಾದ ಭಾರೀ ಸದ್ದು ಮಾಡುತ್ತಿದೆ. ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ದೊಡ್ಡ ದೊಡ್ಡವರ ಹೆಸರೇ ಕೇಳಿಬರುತ್ತಿದೆ.
ಫೋನ್ ಟ್ಯಾಪಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳನ್ನೇ ಬಂಧಿಸಲಾಗಿದೆ. ರಾಜ್ಯ ಗುಪ್ತಚರ ಇಲಾಖೆಯ ಮುಖ್ಯಸ್ಥನ ವಿರುದ್ಧವೇ ಲುಕ್ ಔಟ್ ನೋಟಿಸ್ ಜಾರಿಯಾಗಿದೆ. ಹಲವು ಉದ್ಯಮಿಗಳು, ರಾಜಕಾರಣಿಗಳು, ಸಿನಿಮಾ ನಟ-ನಟಿಯರ ಫೋನ್ ಟ್ಯಾಪ್ ಮಾಡಲಾಗಿತ್ತು ಎನ್ನಲಾಗಿದೆ.
ಇದೀಗ ಯೂ ಟ್ಯೂಬ್ ವಾಹಿನಿಯೊಂದು ನಟಿ ಸಮಂತಾ-ನಾಗಚೈತನ್ಯ ದಾಂಪತ್ಯ ಜೀವನ ಮುರಿದು ಬೀಳುವುದಕ್ಕೂ ಫೋನ್ ಟ್ಯಾಪಿಂಗ್ ಕಾರಣ ಎಂದು ವರದಿ ಮಾಡಿದೆ. ನಾಗಚೈತನ್ಯ ವರ್ತನೆ ಬಗ್ಗೆ ಅಸಮಾಧಾನ ಹೊಂದಿದ್ದ ಸಮಂತಾ ಪತಿಯ ಫೋನ್ ಟ್ಯಾಪಿಂಗ್ ಮಾಡಿಸಿದ್ದರು. ಇದೇ ಕಾರಣಕ್ಕೆ ಇಬ್ಬರೂ ದೂರವಾದರು ಎಂದು ವಾಹಿನಿ ವರದಿ ಮಾಡಿದೆ.
ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಅನೇಕ ಘಟಾನುಘಟಿಗಳ ಹೆಸರು ಕೇಳಿಬಂದಿದೆ. ಇದೀಗ ತೆಲಂಗಾಣ ಮುಖ್ಯಮಂತ್ರಿಯಾಗಿರುವ ರೇವಂತ್ ರೆಡ್ಡಿಯ ಫೋನ್ ಕೂಡಾ ಟ್ಯಾಪ್ ಆಗಿತ್ತು ಎಂದು ವರದಿಯಾಗಿದೆ.