ಲಾಸ್ ಏಂಜಲೀಸ್: ಆಸ್ಕರ್ ಪ್ರಶಸ್ತಿ ಎನ್ನುವುದು ಇಷ್ಟು ದಿನ ಭಾರತದ ಪಾಲಿಗೆ ಕನಸಾಗಿತ್ತು. ಆದರೆ ಅದನ್ನೀಗ ಆರ್ ಆರ್ ಆರ್ ಸಿನಿಮಾ ನನಸು ಮಾಡಿದೆ. ಇದರ ಜೊತೆಗೆ ಎಲಿಫೆಂಟ್ ವಿಸ್ಪರರ್ಸ್ ಎನ್ನುವ ಡಾಕ್ಯುಮೆಂಟರಿ ಕೂಡಾ ಆಸ್ಕರ್ ಅಂಗಳದಲ್ಲಿ ಮಿಂಚಿದೆ.
ಇದುವರೆಗೆ ಪಕ್ಕಾ ಭಾರತೀಯ ಮೂಲದ ಯಾವುದೇ ಸಿನಿಮಾಗಳೂ ಆಸ್ಕರ್ ಪ್ರಶಸ್ತಿ ಗೆದ್ದಿರಲಿಲ್ಲ. ಆದರೆ ಈ ಬಾರಿ ಆರ್ ಆರ್ ಆರ್ ಮೇಲೆ ಎಲ್ಲರ ಭರವಸೆಯಿತ್ತು. ನಾಟ್ಟು ನಾಟ್ಟು ಹಾಡು ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದಾಗ ನಿರೀಕ್ಷೆ ಬಲವಾಗಿತ್ತು. ಅದಕ್ಕೆ ತಕ್ಕಂತೆ ರಾಜಮೌಳಿ ಮತ್ತು ಬಳಗ ಒಂದು ತಿಂಗಳು ಮೊದಲೇ ಅಮೆರಿಕಾಗೆ ತೆರಳಿ ಆರ್ ಆರ್ ಆರ್ ಸಿನಿಮಾವನ್ನು ಪ್ರಮೋಟ್ ಮಾಡಿ ಅಲ್ಲಿನ ಜನರ ಮನಸ್ಸು ಗೆದ್ದಿದ್ದರು. ಇದೀಗ ಶ್ರಮಕ್ಕೆ ತಕ್ಕ ಫಲ ಸಂದಿದೆ.
ಇದರ ಜೊತೆಗೆ ಭಾರತೀಯ ಮೂಲದ ದಿ ಎಲಿಫೆಂಟ್ ವಿಸ್ಪರರ್ಸ್ ಎನ್ನುವ ಡಾಕ್ಯುಮೆಂಟರಿ ಕೂಡಾ ಪ್ರಶಸ್ತಿ ಗೆದ್ದುಕೊಂಡಿದೆ. ಕಾರ್ತಿಕಿ ಗೊನ್ಸಾಲ್ವ್ಸ್ ಎಂಬ ಮಹಿಳಾ ನಿರ್ದೇಶಕಿ ನಿರ್ದೇಶಿಸಿದ್ದ ಡಾಕ್ಯುಮೆಂಟರಿ ಇದಾಗಿತ್ತು. ಇದೀಗ ಇಡೀ ಭಾರತವೇ ಈ ಎರಡು ಸಿನಿಮಾಗಳ ಯಶಸ್ಸನ್ನು ಸಂಭ್ರಮಿಸುತ್ತಿದೆ.