ಬೆಂಗಳೂರು: ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಈಗ ತಮ್ಮ ನಿರ್ಮಾಣದ ಲಾಫಿಂಗ್ ಬುದ್ಧ ಸಿನಿಮಾದ ಬಿಡುಗಡೆ ಹೊಸ್ತಿಲಲ್ಲಿದ್ದಾರೆ. ಈ ವೇಳೆ ಅವರು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಗುಡ್ಡ ಕುಸಿತದ ಬಗ್ಗೆ ಅದ್ಭುತ ಮಾತುಗಳಾಡಿದ್ದಾರೆ.
ರಿಷಬ್ ಶೆಟ್ಟಿ ಕಾಂತಾರ ಸಿನಿಮಾದಲ್ಲಿ ಕಾಡು, ಅದರ ಅಕ್ಕಪಕ್ಕ ವಾಸಿಸುವ ಜನ ಜೀವನದ ಬಗ್ಗೆ ಹೇಳಿದ್ದರು. ಈ ಸಿನಿಮಾ ಹಿಟ್ ಆದ ಬಳಿಕವೂ ರಿಷಬ್ ಫಾರೆಸ್ಟ್ ಗಾರ್ಡ್ ಗಳ ರಕ್ಷಣೆಗಾಗಿ ಕೆಲವೊಂದು ಸಲಹೆಗಳನ್ನು ರಾಜ್ಯ ಸರ್ಕಾರದ ಮುಂದಿಟ್ಟಿದ್ದರು. ಇದೀಗ ಅರಣ್ಯ ನಾಶದ ಬಗ್ಗೆ ಸಂದರ್ಶನವೊಂದರಲ್ಲಿ ಸುಂದರವಾಗಿ ಮಾತನಾಡಿದ್ದಾರೆ.
ಇತ್ತೀಚೆಗೆ ವಯನಾಡಿನಲ್ಲಿ, ಕೆಲವು ಸಮಯದ ಹಿಂದೆ ಕೊಡಗಿನಲ್ಲಿ ಗುಡ್ಡ ಕುಸಿತಗಳಾಗಿತ್ತು. ಈಚೆಗಿನ ವರ್ಷಗಳಲ್ಲಿ ಮಳೆ ಬಂದರೆ ಸಾಕು ಇಂತಹ ಪ್ರದೇಶಗಳಲ್ಲಿ ಗುಡ್ಡ ಕುಸಿತಗಳು ಸಾಮಾನ್ಯವಾಗುತ್ತಿದೆ. ಇದಕ್ಕೆ ಕಾರಣವೇನೆಂದು ಅವರು ಅದ್ಭುತವಾಗಿ ಸಂದರ್ಶನದಲ್ಲಿ ವಿವರಿಸಿದ್ದಾರೆ.
ವಯನಾಡಿನಲ್ಲಿ ಆಗಲೀ, ಕೊಡಗು, ಚಿಕ್ಕಮಗಳೂರಿನಲ್ಲಾಗಲೂ ಗುಡ್ಡ ಕುಸಿತವಾಗಲು ನಾವು ಕೃಷಿ, ಫಾರ್ಮಿಂಗ್, ಬೆಟ್ಟಗಳನ್ನು ಕಡಿದು ಅಭಿವೃದ್ಧಿ ಹೆಸರಿನಲ್ಲಿ ಮಾಡುತ್ತಿರುವ ಕೆಲಸಗಳೇ ಕಾರಣ. ಅದು ಅರ್ಥವಾಗುತ್ತಿಲ್ಲ ಯಾರಿಗೂ. ಈ ಹಿಂದೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ತೇಜು ಅವರ ತಂದೆಯವರು ತುಂಬಾ ಅದ್ಭುತವಾದ ಮಾತು ಹೇಳಿದ್ದರು. ಬೇಕಿದ್ದರೆ ನೀವು ಇತಿಹಾಸ ನೋಡಿ. ನದಿಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿರುತ್ತದೆ. ನದಿಗಳು ಇಂದಿಗೆ ಬತ್ತಿ ಹೋಗಿರಬಹುದು. ಆದರೆ ಅವು ಯಾವತ್ತೂ ತಮ್ಮ ದಾರಿ ಮರೆಯಲ್ಲ. ಅದಕ್ಕೆ ಅದ್ಭುತ ಸ್ಮರಣಾ ಶಕ್ತಿಯಿದೆ. ಒಂದಲ್ಲ ಒಂದು ದಿನ ಮತ್ತೆ ಹುಟ್ಟುತ್ತೆ, ಅದು ಹರಿದು ಎಲ್ಲವನ್ನೂ ಧ್ವಂಸ ಮಾಡಿಕೊಂಡು ಹೋಗುತ್ತವೆ ಎಂದು ರಿಷಬ್ ಹೇಳಿದ್ದಾರೆ. ಅವರ ಈ ಮಾತುಗಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.