ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ವಿಲನ್ ಆಗಿ ಆರ್ಭಟ ಮುಂದುವರೆಸಿರುವವರು ರವಿಶಂಕರ್. ಕೆಂಪೇಗೌಡ ಚಿತ್ರದ ಮೂಲಕ ಖಳ ನಟನಾಗಿ ಅಖಾಡಕ್ಕಿಳಿದು ಪ್ರೇಕ್ಷಕರನ್ನು ಸೆಳೆದುಕೊಂಡಿರೋ ಅವರು ಅದೇ ಶೇಡಿನ ಪಾತ್ರಗಳ ಮೂಲಕವೇ ಮನೆ ಮಾತಾಗಿದ್ದಾರೆ.
ರವಿಶಂಕರ್ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆಂದರೆ ಅದು ಖಳನ ಪಾತ್ರವೆಂದೇ ಯಾರಿಗಾದರೂ ಅರ್ಥವಾಗುತ್ತೆ. ಇಂಥಾ ರವಿಶಂಕರ್ ಚಿರಂಜೀವಿ ಸರ್ಜಾ ಅಭಿನಯದ ಸಿಂಗ ಚಿತ್ರದಲ್ಲಿಯೂ ನಟಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೈಲರ್ ಮೂಲಕ ಚಿರಂಜೀವಿ ಸರ್ಜಾ ಅವರ ಮಾಸ್ ಅವತಾರದ ಪಾತ್ರ ಅನಾವರಣಗೊಂಡಿದೆರಿವರಿಗೆ ಎದುರಾಗಿ ರವಿಶಂಕರ್ ಅಬ್ಬರಿಸಿರೋ ಸೀನುಗಳೂ ಸರಿದು ಹೋಗಿವೆ. ಆದರೆ ನಿರ್ದೇಶಕರು ರವಿಶಂಕರ್ ಅವರ ಪಾತ್ರದಲ್ಲಿಯೂ ಕೂಡಾ ಟ್ವಿಸ್ಟುಗಳನ್ನಿಟ್ಟಿದ್ದಾರೆ. ಈ ವರೆಗೂ ರವಿಶಂಕರ್ ಸಾಕಷ್ಟು ಬಗೆಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ ಅವರ ಪಾಲಿಗೂ ಸ್ಪೆಷಲ್ ಅನ್ನುವಂತೆ ಸಿಂಗನ ಪಾತ್ರ ಮೂಡಿ ಬಂದಿದೆಯಂತೆ.
ಹಾಗಾದರೆ ರವಿಶಂಕರ್ ಅವರಿಲ್ಲಿ ವಿಲನ್ ಪಾತ್ರವಲನ್ನು ನಿರ್ವಹಿಸಿಲ್ಲವಾ ಎಂಬ ಪ್ರಶ್ನೆಗೆ ಚಿತ್ರತಂಡ ಥೇಟರಿನತ್ತ ಕೈ ತೋರಿಸುತ್ತೆ. ಇದೇ ತಿಂಗಳ ಹತ್ತೊಂಬತ್ತರಂದು ಸಿಂಗ ಬಿಡುಗಡೆಯಾಗುತ್ತಿರೋದರಿಂದ ಈ ಪ್ರಶ್ನೆಗೆ ಅಂದೇ ನಿಖರ ಉತ್ತರ ಸಿಗಲಿದೆ. ಆದರೆ ರವಿಶಂಕರ್ ಅವರ ಪಾತ್ರ ಪ್ರೇಕ್ಷಕರ ಅಚ್ಚರಿಗೆ ಕಾರಣವಾಗೋದಂತೂ ಸತ್ಯ. ಕೇವಲ ರವಿಶಂಕರ್ ಅವರ ಪಾತ್ರ ಮಾತ್ರವಲ್ಲ, ಸಿಂಗನ ಎಲ್ಲ ಪಾತ್ರಗಳೂ ಕೂಡಾ ಅಂಥಾದ್ದೇ ಹೊಸತನದ ಟಚ್ ಹೊಂದಿವೆ. ಅದರ ಮಜಾ ಏನೆಂಬುದನ್ನು ತಿಳಿಯಲು ಇನ್ನು ಕೆಲವೇ ದಿನ ಕಾಯಬೇಕಿದೆ.