ಕಮರ್ಶಿಯಲ್ ಜಾಡಿನ ಸಿನಿಮಾಗಳಲ್ಲಿ ಮಿಂಚುತ್ತಾ ಬೇಡಿಕೆ ಹೊಂದಿರೋ ನಟಿಯರಿಗೂ ಕೂಡಾ ಡಿ ಗ್ಲಾಮ್ ಪಾತ್ರ ಮಾಡಬೇಕೆಂಬ ಕನಸಿರುತ್ತದೆ. ಆದರೆ ಮುಖ್ಯ ನಾಯಕಿಯಾಗಿ ಕಾಲೂರಿ ನಿಲ್ಲದೇ ಯಾರೂ ಕೂಡಾ ಇಂಥಾ ಪಾತ್ರಗಳತ್ತ ಗಮನ ಹರಿಸೋದಿಲ್ಲ. ಆದರೆ ಕೆಲವೇ ಕೆಲ ನಟಿಯರು ಮಾತ್ರವೇ ಅದಕ್ಕೆ ಹೊರತಾಗಿರುತ್ತಾರೆ.
ಅಂಥವರ ಸಾಲಿನಲ್ಲಿ ಮೈಸೂರು ಹುಡುಗಿ ಐಶ್ವರ್ಯಾ ರಾವ್ ಕೂಡಾ ಒಬ್ಬರಾಗಿ ಸೇರಿಕೊಳ್ಳುತ್ತಾರೆ. ಅವರು ರಣಹೇಡಿ ಚಿತ್ರದಲ್ಲಿ ಕರ್ಣಕುಮಾರ್ಗೆ ಜೋಡಿಯಾಗಿ ನಟಿಸಿದ್ದಾರೆ. ಅವರು ಯಾವಾಗಲೂ ಬಯಸಿದಂಥಾ ಪಾತ್ರವೇ ಬಹು ಬೇಗನೆ ಸಿಕ್ಕಿರೋದರ ಬಗ್ಗೆ ಐಶ್ವರ್ಯಾರಲ್ಲೊಂದು ಖುಷಿ ಮನೆ ಮಾಡಿಕೊಂಡಿದೆ.
ಮನು ಕೆ. ಶೆಟ್ಟಿ ಹಳ್ಳಿ ಕಥೆಯನ್ನು ಸಿದ್ಧಪಡಿಸಿಕೊಳ್ಳುವಾಗಲೇ ಪಾತ್ರಗಳಿಗೂ ಕಲಾವಿದರನ್ನು ನಿಕ್ಕಿ ಮಾಡಿಕೊಂಡಿದ್ದರಂತೆ. ಕರ್ಣ ಕುಮಾರ್ ಈ ಕಥೆಯನ್ನು, ಪಾತ್ರವನ್ನು ಆರಂಭಿಕವಾಗಿಯೇ ಒಪ್ಪಿಕೊಂಡಿದ್ದರು. ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ಕರ್ಣಕುಮಾರ್ ಕೂಡಾ ಅತ್ಯಂತ ಖುಷಿಯಿಂದಲೇ ಈ ಪಾತ್ರವನ್ನು ಒಪ್ಪಿಕೊಂಡಿದ್ದರು. ಆದರೆ ನಾಯಕಿಯಾಗಿ ಯಾರನ್ನು ಆಯ್ಕೆ ಮಾಡಿಕೊಳ್ಳೋದೆಂಬುದೇ ಪ್ರಶ್ನೆಯಾಗಿತ್ತು. ಅದು ಡಗ್ಲಾಮ್ ಪಾತ್ರ. ನಟನೆಯಲ್ಲಿ ಪಾರಂಗತೆಯಾದ ನಟಿ ಮಾತ್ರವೇ ಅದನ್ನು ನಿರ್ವಹಿಸಲು ಸಾಧ್ಯ. ಇದಕ್ಕಾಗಿ ಹುಡುಕಾಟದಲ್ಲಿದ್ದಾಗ ಅದಾಗಲೇ ರವಿ ಹಿಸ್ಟರಿ ಎಂಬ ಚಿತ್ರದಲ್ಲಿ ನಟಿಸಿದ್ದ ಐಶ್ವರ್ಯಾ ರಾವ್ ನಿರ್ದೇಶಕರ ಕಣ್ಣಿಗೆ ಬಿದ್ದಿದ್ದರು. ಅದು ನಿರ್ದೇಶಕರ ಕನಸಿಗೆ ಹೊಸಾ ಆವೇಗ ಸಿಕ್ಕಂಥಾ ಬೆಳವಣಿಗೆ.
ಐಶ್ವರ್ಯಾ ಪಾತ್ರಕ್ಕೆ ಗ್ಲಾಮರ್ನ ಯಾವ ಪಸೆಯೂ ಇಲ್ಲ. ಈ ಹಿಂದೆ ರವಿ ಹಿಸ್ಟರಿ ಚಿತ್ರದಲ್ಲಿ ಮಾಡ್ ಲುಕ್ಕಿನಲ್ಲಿ ಮಿಂಚಿದ್ದ ಐಶ್ವರ್ಯಾ ಇಲ್ಲಿ ಪಕ್ಕಾ ಕೂಲಿಕಾರರ ಹುಡುಗಿಯಾಗಿ ನಟಿಸಿದ್ದಾರೆ. ಬಳ್ಳಾರಿ ಸೀಮೆಯಿಂದ ಮಂಡ್ಯಕ್ಕೆ ಕಬ್ಬು ಕಟಾವಿಗೆ ಬರುವ ಕೂಲಿಕಾರರ ಕುಟುಂಬದ ಹುಡುಗಿಯಾಗಿ ಐಶ್ವರ್ಯಾ ನಟಿಸಿದ್ದಾರೆ. ಓರ್ವ ನಟಿಯಾಗಿ ಥರ ಥರದ ಪಾತ್ರಗಳನ್ನು ನಿರ್ವಹಿಸಬೇಕೆಂಬ ಆಸೆ ಹೊಂದಿರುವವರು. ರಣಹೇಡಿಯಲ್ಲಿ ಅವರಿಗೆ ಅದಕ್ಕೆ ತಕ್ಕುದಾದ ಪಾತ್ರವೇ ಸಿಕ್ಕಿದೆಯಂತೆ. ಈ ಪಾತ್ರದಲ್ಲಿ ಐಶ್ವರ್ಯಾ ಎಂಥವರೂ ಬೆರಗಾಗುವಂಥಾ ತನ್ಮಯತೆಯಿಂದ ನಟಿಸಿದ್ದಾರೆಂಬ ಮೆಚ್ಚುಗೆ ಚಿತ್ರತಂಡದಲ್ಲಿದೆ.