ಹೊಸತನ ಮತ್ತು ಗಟ್ಟಿಯಾದ ಕಥಾ ಹಂದರ ಹೊಂದಿರೋ ಚಿತ್ರಗಳು ಯಾವ ವೆರೈಟಿಯವೇ ಆಗಿದ್ದರೂ ಪ್ರೇಕ್ಷಕರ ಮನ ಗೆದ್ದು, ನಾನಾ ದಾಖಲೆಗಳ ರೂವಾರಿಯಾಗಲು ಸಾಧ್ಯವಿದೆ. ಆದರೆ ಇಂಥಾ ಗೆಲುವು ದಾಖಲಿಸುವಂಥಾ ಅಪರೂಪದ ಚಿತ್ರಗಳು ತೆರೆಗಾಣೋದು ಕಡಿಮೆ.
ಅಂಥಾ ಚಿತ್ರಗಳ ಸಾಲಿನಲ್ಲಿ ಇತ್ತೀಚೆಗಷ್ಟೇ ತೆರೆ ಕಂಡು ಯಶಸಸ್ವೀ ಪ್ರದರ್ಶನ ನೀಡಿ ಗೆದ್ದಿದ್ದ ಗಂಟುಮೂಟೆ ಚಿತ್ರವೂ ಸೇರಿಕೊಂಡಿದೆ. ಒಂದು ಟ್ರೇಲರ್ ಮೂಲಕವೇ ಭರ್ಜರಿ ಪ್ರಚಾರ ಪಡೆದು ಪ್ರೇಕ್ಷಕರನ್ನು ಆವರಿಸಿಕೊಂಡಿದ್ದ ಈ ಚಿತ್ರ ಸ್ಟಾರ್ ಸಿನಿಮಾಗಳ ಮುಂದೆ ಪೈಪೋಟಿ ನೀಡಿ ಗೆದ್ದಿತ್ತು. ಇದೀಗ ಅಮೇಜಾನ್ ಪ್ರೈಮ್ನಲ್ಲಿಯೂ ಗಂಟುಮೂಟೆಯ ದರ್ಶನ ಭಾಗ್ಯ ಪ್ರೇಕ್ಷಕರ ಪಾಲಿಗೆ ಸಿಕ್ಕಿದೆ.
ಬಹುತೇಕ ಎಲ್ಲ ವರ್ಗಗಳ ಪ್ರೇಕ್ಷಕರೂ ಸಹ ಗಂಟುಮೂಟೆಯನ್ನು ಮುಗಿ ಬಿದ್ದು ನೋಡಿದ್ದರು. ಅದರಲ್ಲಿದ್ದ ತೊಂಭತ್ತರ ದಶಕದ ಪ್ರೇಮ ಕಥೆಯ ಮೋಡಿಯೇ ಅಂಥಾದ್ದಿತ್ತು. ಇದು ನವ ನಿರ್ದೇಶಕಕಿ ರೂಪಾ ರಾವ್ ಅವರ ಚೊಚ್ಚಲ ಚಿತ್ರ. ಆದರೆ ಮೊದಲ ಹೆಜ್ಜೆಯಲ್ಲಿ ಎಂಥವರಾದರೂ ಹಿಂದೇಟು ಹಾಕುವಂಥಾ ಕಥೆಯನ್ನೇ ಅವರು ಈ ಮೂಲಕ ಹೇಳಿದ್ದಾರೆ.
ತೊಂಬತ್ತರ ದಶಕದ ಹೈಸ್ಕೂಲು ಪ್ರೇಮ ಕಥಾನಕವನ್ನೊಳಗೊಂಡಿರೋ ಗಂಟುಮೂಟೆ ಪ್ರತಿಯೊಬ್ಬರನ್ನೂ ಖುಷಿಗೊಳಿಸಿದೆ. ಅನೇಕರು ತಮ್ಮದೇ ನೆನಪುಗಳ ನೆತ್ತಿ ಸವರಿಕೊಂಡು ಥ್ರಿಲ್ ಆಗಿದ್ದಾರೆ. ಮತ್ತೆ ಕೆಲವರು ಇಲ್ಲಿರೋ ಬಿಡುಬೀಸಾದ ನಿರೂಪಣೆ ಮತ್ತು ತಣ್ಣಗೆ ಪ್ರವಹಿಸುವ ಭಾವತೀವ್ರತೆಗೆ ಮನ ಸೋತಿದ್ದಾರೆ. ಎಲ್ಲರನ್ನೂ ಒಂದೊಂದು ರೀತಿಯಲ್ಲಿ ಆವರಿಸಿಕೊಂಡಿರುವ ಈ ಚಿತ್ರ ಗೆಲುವು ಕಂಡಿದೆ.
ಈ ಸಿನಿಮಾ ಬಿಡುಗಡೆಗೊಂಡ ಕ್ಷಣದಿಂದಲೇ ತಾನೇ ತಾನಾಗಿ ಪ್ರಸಿದ್ಧಿ ಪಡೆದುಕೊಂಡಿತ್ತು. ಆದರೂ ಕೂಡಾ ಈ ಚಿತ್ರವನ್ನು ಸಿನಿಮಾ ಮಂದಿರದಲ್ಲಿ ನೋಡಲು ಸಾಧ್ಯವಾಗದವರು ಕೊರಗುವ ಅಗತ್ಯವೇನಿಲ್ಲ. ಅದೀಗ ಅಮೇಜಾನ್ ಪ್ರೈಮ್ ಮೂಲಕ ಎಲ್ಲರ ಬೆರಳ ಮೊನೆ ಸೋಕಿದೆ. ಇದರಲ್ಲಿನ ಚೆಂದದ ಕಥೆ, ಪ್ರಯೋಗಾತ್ಮಕ ಗುಣ ಮತ್ತು ಹೊಸತನದ ನಿರೂಪಣೆಗೆ ಮನಸೋತಿರೋ ಅಮೇಜಾನ್ ಪ್ರೈಂ ದೊಡ್ಡ ಮೊತ್ತಕ್ಕೆ ಗಂಟುಮೂಟೆಯ ವಿತರಣಾ ಹಕ್ಕುಗಳನ್ನು ಖರೀದಿಸಿದೆ. ಈ ಮೂಲಕ ಈ ಸಿನಿಮಾಗೆ ಮತ್ತಷ್ಟು ಪ್ರೇಕ್ಷಕ ವರ್ಗವನ್ನು ತಲುಪಿಕೊಳ್ಳುವ ಅವಕಾಶ ಸಿಕ್ಕಂತಾಗಿದೆ.