ಬೆಂಗಳೂರು: ಮಲಯಾಳಂ ಸಿನಿಮಾ ರಂಗದ ಬಳಿಕ ಈಗ ಕನ್ನಡ ಚಿತ್ರರಂಗದಲ್ಲೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಬಗ್ಗೆ ತನಿಖೆ ಮಾಡಲು ಸಮಿತಿ ರಚನೆ ಮಾಡುವ ಬಗ್ಗೆ ಚರ್ಚೆಯಾಗುತ್ತಿದೆ. ಇದೀಗ ಈ ಬಗ್ಗೆ ನಿರ್ಮಾಪಕಿ, ನಟಿ ರಕ್ಷಿತಾ ಪ್ರೇಮ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡ ರಕ್ಷಿತಾ ಪ್ರೇಮ್, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ತನಿಖೆ ಮಾಡಲು ಒಂದು ಸಮಿತಿ ರಚನೆಯಾಗಲಿ ಎಂದಿದ್ದಾರೆ. ಆದರೆ ಲೈಂಗಿಕ ದೌರ್ಜನ್ಯ ಎನ್ನುವುದು ಕೇವಲ ಸಿನಿಮಾಗೆ ಸೀಮಿತವಾಗಿಲ್ಲ ಎಂದಿದ್ದಾರೆ.
ಹಲವು ಮಹಿಳೆಯರು ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಕೆಲವೊಮ್ಮೆ ಇದು ದುರ್ಬಳಕೆಯಾಗುವುದೂ ಇದೆ. ಬಹುಸಂಖ್ಯಾತ ಪುರುಷರ ನಡುವೆ ಕೆಲಸ ಮಾಡುವಾಗ ಮಹಿಳೆಯರು ಹಲವು ಸಮಸ್ಯೆಗಳನ್ನು ಎದುರಿಸುತ್ತಾಳೆ. ಸಿನಿಮಾ ರಂಗದಲ್ಲಿ ಮತ್ತು ಹೊರಗೆ ಮಹಿಳೆಯರು ಹಲವು ರೀತಿಯಲ್ಲಿ ದೌರ್ಜನ್ಯಕ್ಕೊಳಗಾಗುತ್ತಿದ್ದಾಳೆ. ಅದು ಬಸ್ ನಲ್ಲಿ ಆಗಿರಬಹುದು, ರೈಲು ಪ್ರಯಾಣದಲ್ಲಿರಬಹುದು, ರಸ್ತೆಯಲ್ಲಿ ನಡೆದಾಡುವಾಗ ಇರಬಹುದು ಅಥವಾ ಸಿನಿಮಾ ಸೆಟ್ ನಲ್ಲಿರಬಹುದು. ಇದರ ಬಗ್ಗೆ ಮುಕ್ತವಾಗಿ ಮಾತನಾಡುವುದರಿಂದ ನೀವು ದುರ್ಬಲರೆನಿಸಿಕೊಳ್ಳುವುದಿಲ್ಲ.
ನನ್ನ ಪ್ರಕಾರ ಇಂತಹ ವಿಚಾರಗಳ ಬಗ್ಗೆ ದೂರು ಕೊಡಲು ಪೊಲೀಸ್ ಠಾಣೆಗಳಿವೆ. ಮಹಿಳೆಯರಿಗೆ ಕಿರುಕುಳ ಕೊಡುವವರ ವಿರುದ್ಧ ತಕ್ಷಣವೇ ಪೊಲೀಸರಿಗೆ ದೂರು ನೀಡಬಹುದು. ಮಾನಸಿಕವಾಗಿ ಅಥವಾ ದೈಹಿಕವಾಗಿ ಯಾವುದೇ ರಂಗದಲ್ಲಿ ಕಿರುಕುಳ ಅನುಭವಿಸಿದ ಮಹಿಳೆ ನ್ಯಾಯ ಪಡೆಯಲು ಅರ್ಹಳು. ಚಿತ್ರರಂಗದ ಮಹಿಳೆಯರ ಸಮಸ್ಯೆ ನಿವಾರಿಸಲು ಒಂದು ಸಮಿತಿ ರಚನೆ ಮಾಡಿದರೆ ಅದಕ್ಕೆ ನನ್ನ ಬೆಂಬಲವಿದೆ ಎಂದು ರಕ್ಷಿತಾ ಹೇಳಿದ್ದಾರೆ.