ಬೆಂಗಳೂರು: ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅಪರೂಪಕ್ಕೆ ಅಭಿಮಾನಿಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೋತ್ತಾರವಳಿ ನಡೆಸಿದ್ದಾರೆ.
ನಿನ್ನೆ ರಾಧಿಕಾ ಹುಟ್ಟುಹಬ್ಬವಿತ್ತು. ಈ ಸಂದರ್ಭದಲ್ಲಿ ರಾಧಿಕಾ ಇನ್ ಸ್ಟಾಗ್ರಾಂನಲ್ಲಿ ಪ್ರಶ್ನೋತ್ತರಾವಳಿ ನಡೆಸಿದ್ದಾರೆ. ಈ ವೇಳೆ ಕೆಲವು ಇಂಟ್ರೆಸ್ಟಿಂಗ್ ವಿಚಾರಗಳನ್ನು ರಾಧಿಕಾ ಹಂಚಿಕೊಂಡಿದ್ದಾರೆ.
ಅಭಿಮಾನಿಯೊಬ್ಬರು ರಾಧಿಕಾ ಕೈಯಲ್ಲಿ ಸದಾ ಇರುವ ರಿಂಗ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ರಾಧಿಕಾ ಇದು ವೈಟ್ ಗೋಲ್ಡ್ ರಿಂಗ್. ಇದು ನನ್ನ ಮೊದಲ ಸಂಪಾದನೆಯಲ್ಲಿ ಖರೀದಿಸಿದ ರಿಂಗ್. ಹಾಗಾಗಿ ನಾನು ಯಾವತ್ತೂ ಈ ಉಂಗುರವನ್ನು ಧರಿಸುತ್ತೇನೆ ಎಂದಿದ್ದಾರೆ.
ನಿಮ್ಮ ದಿನದ ಅತ್ಯಂತ ಖುಷಿಯ ಗಳಿಗೆ ಯಾವುದು ಎಂದು ಕೇಳಿದ್ದಕ್ಕೆ ಸಂಜೆ ನನಗೆ ಪ್ರಿಯವಾದ ಸಮಯ. ನನ್ನ ಮಕ್ಕಳು ಶಾಲೆಯಿಂದ ಬಂದ ಮೇಲೆ, ನನ್ನ ಗಂಡ ಕೆಲಸ ಮುಗಿಸಿ ಮನೆಗೆ ಬಂದಾಗ ಊಟ ಮಾಡುತ್ತಾ ಅಂದಿನ ದಿನದ ವಿಶೇಷತೆಗಳನ್ನು ಹೇಳಿಕೊಳ್ಳುವುದು ಇಷ್ಟದ ಸಮಯ ಎಂದಿದ್ದಾರೆ.
ಅಲ್ಲದೆ, ಯಶ್ ಈ ಮೊದಲು ರಾಧಿಕಾ ಹುಟ್ಟುಹಬ್ಬದಂದು ಕೊತ್ತಂಬರಿ ಸೊಪ್ಪನ್ನೇ ಬೊಕೆ ಮಾಡಿಕೊಟ್ಟ ಗಳಿಗೆ ಬಗ್ಗೆ ಅನೇಕ ಬಾರಿ ಹೇಳಿಕೊಂಡಿದ್ದರು. ಈ ಬಾರಿ ರಾಧಿಕಾ ಆ ಫೋಟೋ ಹಂಚಿಕೊಂಡಿದ್ದಾರೆ. ಇನ್ನು ತಮ್ಮ ವೈವಾಹಿಕ ಜೀವನದ ಯಶಸ್ಸಿನ ಗುಟ್ಟು ನಮ್ಮಿಬ್ಬರ ನಡುವೆ ಇರುವ ಸ್ನೇಹ ಎಂದು ರಾಧಿಕಾ ಹೇಳಿಕೊಂಡಿದ್ದಾರೆ.