ಬೆಂಗಳೂರು: ಸುಮಲತಾ ಅಂಬರೀಶ್ ಮಂಡ್ಯ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬೆನ್ನಲ್ಲೇ ಪುನೀತ್ ರಾಜ್ ಕುಮಾರ್ ಸುಮಲತಾಗೆ ಬೆಂಬಲ ಕೊಡ್ತೀನಿ ಎಂದು ಹೇಳಿದ್ದಾರೆ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
ಆದರೆ ಇದೀಗ ಪುನೀತ್ ರಾಜ್ ಕುಮಾರ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸಾರ್ವಜನಿಕರಿಗೆ ಪತ್ರ ಬರೆದಿದ್ದು ನಾನು ಕಲಾವಿದ, ರಾಜಕೀಯಕ್ಕೂ ನನಗೂ ಸಂಬಂಧವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಮೊದಲಿನಿಂದಲೂ ಡಾ. ರಾಜ್ ಕುಟುಂಬ ಯಾವ ರಾಜಕೀಯ ಪಕ್ಷದ ಅಥವಾ ಅಭ್ಯರ್ಥಿಯ ಪರವಾಗಿಯೂ ಪ್ರಚಾರ ನಡೆಸಿಲ್ಲ. ಈ ಮೊದಲು ಶಿವರಾಜ್ ಕುಮಾರ್ ಪತ್ನಿ ಗೀತಾ ಜೆಡಿಎಸ್ ನಿಂದ ಒಮ್ಮೆ ಸ್ಪರ್ಧೆ ಮಾಡಿದ್ದು ಬಿಟ್ಟರೆ ರಾಜಕಾರಣದಲ್ಲಿ ರಾಜ್ ಕುಟುಂಬ ಕಾಣಿಸಿಕೊಂಡಿಲ್ಲ.
ಇದೀಗ ಸುಮಲತಾಗೆ ಬೆಂಬಲ ನೀಡಿರುವ ಕುರಿತಂತೆ ತಮ್ಮ ಬಗ್ಗೆ ಇಲ್ಲದ ಸುದ್ದಿ ಹರಡುವ ಮೊದಲೇ ಪುನೀತ್ ಸ್ಪಷ್ಟನೆ ನೀಡಿದ್ದಾರೆ. ನಾನು ಕಲಾವಿದನಾಗಿ ಗುರುತಿಸಿಕೊಳ್ಳುತ್ತೇನೆಯೇ ಹೊರತು, ರಾಜಕಾರಣಿಯಾಗಲ್ಲ. ಮತದಾನ ಎಲ್ಲರ ಹಕ್ಕು. ಪ್ರತಿಯೊಬ್ಬ ನಾಗರಿಕನೂ ಮತದಾನ ಮಾಡಬೇಕು. ಅದನ್ನು ನಾನು ಗೌರವಿಸುತ್ತೇನೆ ಎಂದಿದ್ದಾರೆ.
ಅಷ್ಟೇ ಅಲ್ಲದೆ, ಅಂಬರೀಶ್ ಕುಟುಂಬವು ಮತ್ತು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಕುಟುಂಬವು ನಮಗೆ ಹಿತೈಷಿಗಳು. ಇಬ್ಬರಿಗೂ ಒಳ್ಳೆದಾಗಲಿ. ಇನ್ನಷ್ಟು ಜನ ಸೇವೆ ಮಾಡುವ ಶಕ್ತಿ ಭಗವಂತ ನೀಡಲಿ. ಆದರೆ ನನ್ನ ಹೆಸರನ್ನು ಚುನಾವಣೆ ಮತ್ತು ರಾಜಕೀಯಕ್ಕೆ ತರಬೇಡಿ ಎಂದು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ