ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮರಿಮೊಮ್ಮಗ, ನಿಖಿಲ್ ಕುಮಾರಸ್ವಾಮಿ ಮುದ್ದಿನ ಮಗನಿಗೆ ಇಂದು ನಾಮಕರಣ ಸಂಭ್ರಮ.
ದೊಡ್ಡ ಗೌಡ್ರ ಮನೆ ಮೊಮ್ಮಗನಿಗೆ ಆವ್ಯನ್ ದೇವ್ ಎಂದು ನಾಮಕರಣ ಮಾಡಲಾಗಿದೆ. ಇಂದು ದೇವೇಗೌಡರ ಕುಟುಂಬ ಮಗುವಿಗೆ ಅದ್ಧೂರಿಯಾಗಿ ನಾಮಕರಣ ಶಾಸ್ತ್ರ ನೆರವೇರಿಸಿದೆ.
ಈ ಸಮಾರಂಭದಲ್ಲಿ ಕೇವಲ ಕುಟುಂಬಸ್ಥರು, ಆಪ್ತರು ಮಾತ್ರ ಭಾಗಿಯಾಗಿದ್ದರು. ಬಳಿಕ ಮಾಧ್ಯಮಗಳ ಮುಂದೆ ನಿಖಿಲ್ ದಂಪತಿ ಆವ್ಯನ್ ಸಮೇತರಾಗಿ ಬಂದು ಸಂಭ್ರಮ ಹಂಚಿಕೊಂಡರು. ಆವ್ಯನ್ ಎಂದರೆ ಗಣೇಶ ಮತ್ತು ವಿಷ್ಣುವಿನ ಹೆಸರು. ಈ ಹೆಸರನ್ನು ನನ್ನ ಪತ್ನಿ ರೇವತಿ ಆಯ್ಕೆ ಮಾಡಿದ್ದಾಳೆ. ನನ್ನ ಮಗ ಒಳ್ಳೆ ಪ್ರಜೆಯಾಗಲಿ ಎಂಬುದು ನಮ್ಮ ಹಾರೈಕೆ ಎಂದು ನಿಖಿಲ್ ಹೇಳಿದರು.