ಬೆಂಗಳೂರು: ಪೇಜಾವರ ಶ್ರೀಗಳು ದಲಿತರ ಮನೆಗೆ ಹೋದಾಗ ಕೋಳಿ ಕೊಟ್ಟರೆ ತಿಂತಾರಾ ಎಂದು ವಿವಾದಾತ್ಮಕ ಮಾತನಾಡಿದ್ದ ಸಂಗೀತ ನಿರ್ದೇಶಕ ಹಂಸಲೇಖಾ ಕ್ಷಮೆ ಕೇಳಿದರೂ ನೆಟ್ಟಿಗರು ಅವರ ಮೇಲೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ವಿವಾದದ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಹಂಸಲೇಖಾ ಕ್ಷಮೆ ಯಾಚಿಸಿದ್ದಾರೆ. ಹಾಗಿದ್ದರೂ ಹಂಸಲೇಖಾ ಕೇವಲ ಪೇಜಾವರ ಶ್ರೀಗಳಿಗೆ ಮಾತ್ರವಲ್ಲ, ಇಡೀ ಹಿಂದೂ ಸಮುದಾಯದ ನಂಬಿಕೆಯನ್ನೇ ಪ್ರಶ್ನೆ ಮಾಡಿದರು. ನಿಮ್ಮ ಮೇಲೆ ಇದುವರೆಗೆ ಇದ್ದ ಗೌರವವೇ ಹೋಯ್ತು ಎಂದು ಕೆಲವರು ಕಿಡಿ ಕಾರಿದ್ದಾರೆ.
ಇನ್ನು, ಸಂಸದ ಪ್ರತಾಪ್ ಸಿಂಹ ಕೂಡಾ ಹಂಸಲೇಖಾ ವಿರುದ್ಧ ಕಿಡಿ ಕಾರಿದ್ದಾರೆ. ಪೇಜಾವರ ಶ್ರೀಗಳು ಇತರ ಶ್ರೀಗಳಂತಲ್ಲ. ಜಾತಿ ವ್ಯವಸ್ಥೆಯನ್ನು ಮೀರಿ ಸಮಾನತೆ ಸಾರಿದವರು. ಪ್ರತ್ಯೇಕತೆಯನ್ನು ನಿವಾರಿಸಲು ಹೋರಾಡಿದವರು. ಸಾಧು ಸಂತರ ಆಹಾರ ಪದ್ಧತಿ ಸಸ್ಯಾಹಾರ. ಹಂಸಲೇಖಾ ಅವರು ಪರಿಜ್ಞಾನದಿಂದ ಮಾತನಾಡಬೇಕಿತ್ತು.
ಇಷ್ಟೆಲ್ಲಾ ಮಾತನಾಡುವವರು ನಿಮ್ಮ ಮನೆಗೆ ಮುಸ್ಲಿಂ ಸ್ನೇಹಿತರನ್ನು ಕರೆದು ಅವರಿಗೆ ಹಂದಿ ಮಾಂಸದ ಊಟ ಕೊಡಿ. ಅವರು ತಿನ್ನುತ್ತಾರಾ ನೋಡಿ. ಮುಸ್ಲಿಂ ಧರ್ಮದಲ್ಲಿ ಹಂದಿ ಮಾಂಸ ತಿನ್ನುವುದು ನಿಷಿದ್ಧ. ಹಾಗಂತ ಅದನ್ನು ತಪ್ಪು ಎನ್ನುತ್ತೀರಾ? ಪ್ರಗತಿಪರ ಎಂಬ ಗೀಳಿಗೆ ಬಿದ್ದು, ಪ್ರಚಾರ ಗಿಟ್ಟಿಸಲು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಕಿಡಿ ಕಾರಿದ್ದಾರೆ.