ಮನುಷ್ಯನಿಗೆ ಮನುಷ್ಯನೇ ಶತ್ರು, ನಾವೇ ನಮ್ಮ ಹೊರಗಡೆ ಇರುವ ಶತ್ರುವನ್ನು ಮಟ್ಟ ಹಾಕುವ ಮೊದಲು ನಮ್ಮೊಳಗಿರುವ ಶತ್ರುವನ್ನು ಮಟ್ಟಹಾಕಬೇಕು ಎನ್ನುವ ಎಳೆಯನ್ನಿಟ್ಟುಕೊಂಡು ತಯಾರಾಗಿರುವ ಸಿನಿಮಾ 'ಮೌನಂ'. ಚಿತ್ರೀಕರಣವನ್ನು ಕಂಪ್ಲೀಟ್ ಮಾಡಿಕೊಂಡಿದ್ದು, ಫೆಬ್ರವರಿ 21ಕ್ಕೆ ತೆರೆಗೆ ಬರಲು ರೆಡಿಯಾಗಿದೆ. ಈಗಾಗಲೇ ಪೋಸ್ಟರ್ ನಿಂದ ಸಾಕಷ್ಟು ಕುತೂಹಲವನ್ನು ಹುಟ್ಟು ಹಾಕಿದ್ದ ಚಿತ್ರ, ಹಾಡೋಂದನ್ನ ರಿಲೀಸ್ ಮಾಡಿ ಹೌದಾ ಎಂಬ ಆಶ್ಚರ್ಯವನ್ನು ಹುಟ್ಟಿಸಿದೆ.
ಕಲೆ ಯಾರ ಸ್ವತ್ತು ಅಲ್ಲ ಅನ್ನೋದಕ್ಕೆ 'ಮೌನಂ' ಸಿನಿಮಾದಲ್ಲಿ ಮೂಡಿ ಬಂದಿರುವ ಹಾಡೊಂದು ಉದಾಹರಣೆ. 'ನಿನ್ನ ಉಸಿರಲ್ಲಿಯೇ' ಎಂಬ ಹಾಡಿನ ಸಾಹಿತ್ಯವನ್ನ ಆಟೋ ಡ್ರೈವರ್ ಆಕಾಶ್ ಎಂಬುವವರು ಬರೆದಿದ್ದಾರೆ. ಆ ಸಾಹಿತ್ಯಕ್ಕೆ ಆರವ್ ರಿಶಿಕ್ ಅದ್ಭುತವಾಗಿ ಮ್ಯೂಸಿಕ್ ನೀಡಿದ್ದಾರೆ. ನಿನ್ನ ಉಸಿರಲ್ಲಿ ಹಾಡು ಕಿವಿಗೆ ಇಂಪಾಗಿ ಹಾಗೇ ತೇಲಿಸುವಂತೆ ಮಾಡುತ್ತಿದೆ. ಆಟೋ ಡ್ರೈವರ್ ಬರೆದ ಸಾಹಿತ್ಯಕ್ಕೆ ಆಟೋ ಡ್ರೈವರ್ ಗಳಿಂದಲೇ ಈ ಹಾಡನ್ನ ರಿಲೀಸ್ ಮಾಡಿಸಲಾಗಿದೆ ಅದು ಈ ಸಿನಿಮಾದ ವಿಶೇಷ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಎಲ್ಲರು ತಮ್ಮ ಪ್ರಿಯತಮೆಗಾಗಿ ಈ ಹಾಡನ್ನ ಗುನುಗುತ್ತಿದ್ದಾರೆ.
'ಮೌನಂ' ಸಿನಿಮಾದಲ್ಲಿ ಇನ್ನು ಸಾಕಷ್ಟು ವಿಶೇಷತೆಗಳಿಗಳಿವೆ. ಈ ಚಿತ್ರದಲ್ಲಿ 3 ಹಾಡುಗಳಿವೆ. ಅಷ್ಟು ಹಾಡನ್ನು ಆಕಾಶ್ ಎಂಬುವವರೇ ಬರೆದಿರುವುದು ಮತ್ತೊಂದು ವಿಶೇಷ. 'ಮೌನಂ' ತಂಡ ಸಾಹಿತ್ಯಗಾರರಿಗೆ ಹುಡುಕಾಟ ನಡೆಸುತ್ತಿದ್ದಾಗ ಆಕಾಶ್ ಭೇಟಿ ನೀಡಿ ಲಿರಿಕ್ಸ್ ಬರೆಯುವುದಾಗಿ ಕೇಳಿದ್ದರಂತೆ. ನಂಬರ್ ಕೊಟ್ಟು ಹೋಗಿ ಆಮೇಲೆ ಹೇಳ್ತೀನಿ ಅಂತ ಡೈರೆಕ್ಟರ್ ರಾಜ್ ಪಂಡಿತ್ ಹೇಳಿದಾಗ ಆಕಾಶ್ ಬೇಸರ ಮಾಡಿಕೊಂಡು ಅವಕಾಶ ಕೊಟ್ಟರಷ್ಟೆ ಅಲ್ವಾ ಸರ್ ನಾವೂ ಲಿರಿಕ್ಸ್ ಬರಿತೀವಿ ಅಂತ ಗೊತ್ತಾಗೋದು ಅಂದಾಗ ಒಂದು ಅವಕಾಶ ಕೊಡೋಣ ಅಂತ ರಾಜ್ ಪಂಡಿತ್ ಆಕಾಶ್ ಬಳಿ ಸಾಹಿತ್ಯ ಬರೆಸಿದ್ರಂತೆ. ಆರಂಭದಲ್ಲಿ ಮ್ಯೂಸಿಕ್ ಗೆ ತಕ್ಕ ಹಾಗೆ ಹೇಗೆ ಬರೆಯೋದು ಎಂಬುದು ಆಕಾಶ್ ಗೆ ಗೊತ್ತಿಲ್ಲದೆ ಇದ್ರು, ನಿರ್ದೇಶಜ ರಾಜ್ ಪಂಡಿತ್ ಸಲಹೆಯಂತೆ ಅದ್ಭುತ ಸಾಹಿತ್ಯ ಬರೆದಿದ್ದಾರೆ. ಇದೀಗ ಸಿನಿಮಾದ ಮೂರು ಹಾಡುಗಳನ್ನು ಅವರ ಬಳಿಯೇ ಬರೆಸಲಾಗಿದೆ ಅಂತ ನಿರ್ದೇಶಕ ರಾಜ್ ಪಂಡಿತ್ ಖುಷಿ ಹಂಚಿಕೊಂಡಿದ್ದಾರೆ.
ಶ್ರೀಹರಿ ಬಂಡವಾಳ ಹೂಡಿ ನಿಹಾರಿಕ ಮೂವೀಸ್ ನಿರ್ಮಾಣ ಮಾಡುತ್ತಿರುವ 'ಮೌನಂ' ಸಿನಿಮಾವನ್ನ ರಾಜ್ ಪಂಡಿತ್ ನಿರ್ದೇಶನ ಮಾಡಿದ್ದಾರೆ. ಮಯೂರಿ, ಸಿಂಚನ, ಬಾಲಾಜಿ ಶರ್ಮಾ, ಅವಿನಾಶ್, ರಿತೇಶ್ ಸೇರಿದಂತೆ ಅನೇಕರು ತಾರಾ ಬಳಗದಲ್ಲಿದ್ದಾರೆ. ಶಂಕರ್ ಛಾಯಾಗ್ರಹಣ, ಗುರುಮೂರ್ತಿ ಹೆಗ್ಡೆ, ಅನುರಂಜನ್ ಹೆಚ್ ಆರ್ ಸಂಕಲನ ಮಾಡಿದ್ದಾರೆ.