ಬೆಂಗಳೂರು: ಎರಡು ತಿಂಗಳು ಲಾಕ್ ಡೌನ್ ಆಗಿ ಮನೆಯಲ್ಲೇ ಕೂತಿದ್ದ ಧಾರವಾಹಿ ತಂಡಗಳಿಗೆ ಈಗ ಮರಳಿ ತೆರೆಗೆ ಬರುವ ಉತ್ಸಾಹ. ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಶೂಟಿಂಗ್ ಆರಂಭಿಸಿರುವ ಕನ್ನಡ ಧಾರವಾಹಿಗಳು ಇದೀಗ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
ಎರಡು ತಿಂಗಳು ಮನೆಯಲ್ಲೇ ಕುಳಿತಿದ್ದಾಗ ತಮ್ಮ ಧಾರವಾಹಿಗಳ ಕತೆ, ಚಿತ್ರಕತೆಯನ್ನು ಮತ್ತಷ್ಟು ತಿದ್ದಿ ತೀಡಿರುವ ತಂತ್ರಜ್ಞರು ಈಗ ಹೊಸ ಸಂಚಿಕೆಗಳಲ್ಲಿ ಹೊಸ ಟ್ವಿಸ್ಟ್, ರೋಚಕತೆ ಹೆಚ್ಚಿಸುವ ಭರವಸೆ ನೀಡಿದ್ದಾರೆ.
ಹೆಚ್ಚಿನ ಧಾರವಾಹಿ ನಿರ್ದೇಶಕರೂ ಇದೇ ಮಾತನಾಡಿದ್ದು, ಸೀಮಿತ ಪರಿಧಿಯೊಳಗೇ ಶೂಟಿಂಗ್ ನಡೆಸಿದರೂ ಮೂಲ ಕಂಟೆಂಟ್ ಗೆ ಧಕ್ಕೆ ಬಾರದ ರೀತಿಯಲ್ಲಿ, ಹೊಸತನದ ಕತೆ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಹೀಗಾಗಿ ಅದೇ ಏಕತಾನತೆಯಿಂದ ಬೇಸತ್ತಿದ್ದ ಪ್ರೇಕ್ಷಕರಿಗೆ ಮುಂದಿನ ವಾರದಿಂದ ರೋಚಕ ಸನ್ನಿವೇಶಗಳನ್ನು ನೋಡುವ ಅವಕಾಶ ಸಿಗಬಹುದು ಎಂದು ಧಾರವಾಹಿ ತಂಡಗಳು ಭರವಸೆ ನೀಡಿವೆ.