ಬೆಂಗಳೂರು: ಈಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿರುವ ಕಿರುತೆರೆ, ಹಿರಿತೆರೆ ಕಲಾವಿದರಿಗೆ ಲಾಕ್ ಡೌನ್, ಅದಾದ ಬಳಿಕ ಡಬ್ಬಿಂಗ್ ಎನ್ನುವುದು ಭವಿಷ್ಯವನ್ನೇ ಕಸಿದುಕೊಂಡಿದೆ.
ಇದೇ ಕಾರಣಕ್ಕೇ ಸುಶೀಲ್ ಗೌಡ ಆತ್ಮಹತ್ಯೆ ಪ್ರಕರಣದಂತಹ ಘಟನೆಗಳು ನಡೆಯುತ್ತಿದೆ ಎಂದರೂ ತಪ್ಪಾಗಲಾರದು. ಮನೋಬಲ ಗಟ್ಟಿಯಾಗಿದ್ದರೆ, ಅಂತಹ ಸಮಯದಲ್ಲಿ ಆಪ್ತರ ಬೆಂಬಲ ಸಿಕ್ಕರೆ ಜೀವನದಲ್ಲಿ ಹೊಸ ಭರವಸೆ ಸಿಗುತ್ತದೆ. ಇಲ್ಲದೇ ಹೋದರೆ ಮನುಷ್ಯ ಆತ್ಮಹತ್ಯೆಯಂತಹ ಕೆಟ್ಟ ದಾರಿ ನೋಡಿಕೊಳ್ಳುತ್ತಾನೆ.
ಲಾಕ್ ಡೌನ್ ಸಡಿಲಿಕೆಯಾದ ಬಳಿಕ ಕಿರುತೆರೆ ಚಟುವಟಿಕೆಗಳು ಪುನರಾರಂಭಗೊಂಡರೂ ಡಬ್ಬಿಂಗ್ ಹೊಡೆತದಿಂದ ಅನೇಕ ಕನ್ನಡ ಕಲಾವಿದರು ಕೆಲಸ ಕಳೆದುಕೊಂಡಿದ್ದಾರೆ. ಇದು ಹಲವು ಯುವ ಕಲಾವಿದರನ್ನು, ಕಲೆಯನ್ನೇ ನಂಬಿಕೊಂಡವರ ಬದುಕು ದುಸ್ತರವಾಗಿಸಲಿದೆ.
ಇನ್ನು ಹಿರಿತೆರೆಯಲ್ಲೂ ಇದೇ ಕತೆ. ಶೂಟಿಂಗ್ ಮತ್ತಿತರ ಚಟುವಟಿಕೆಗಳಿಗೆ ಅನುಮತಿ ಕೊಟ್ಟರೂ ಚಿತ್ರಗಳೇ ಬಿಡುಗಡೆಯಾಗುತ್ತಿಲ್ಲ ಎಂದಾದರೆ ಶೂಟಿಂಗ್ ಮಾಡಿಯೂ ಏನು ಪ್ರಯೋಜನ? ಇನ್ನು ಕೆಲವರು ಲಾಕ್ ಡೌನ್ ಗೆ ಮೊದಲು ಹೊಸ ಸಿನಿಮಾ ಮಾಡಲು ಹೊರಟಿದ್ದರೂ ಲಾಕ್ ಡೌನ್ ಬಳಿಕ ಆರ್ಥಿಕ ಸಂಕಷ್ಟದಿಂದಾಗಿ ಸಿನಿಮಾ ಅರ್ಧಕ್ಕೇ ಕೈ ಬಿಟ್ಟಿದ್ದಾರೆ. ಮತ್ತೆ ಕೆಲವು ಸೆಟ್ಟೇರಿದ ಸಿನಿಮಾಗಳೂ ಮುಂದೆ ಪೂರ್ತಿಯಾಗುತ್ತಾ, ಹೇಳ ಹೆಸರಿಲ್ಲದೇ ತೆರೆಮರೆಗೆ ಸಾಗುತ್ತಾ ಅನ್ನುವ ಗೊಂದಲದಲ್ಲೇ ಇವೆ.
ಇದರಿಂದಾಗಿ ಯವ ಕಲಾವಿದರು, ಆಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿರುವವರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದಾರೆ. ಇದನ್ನು ಯಾರಲ್ಲೂ ಹೇಳಿಕೊಳ್ಳಲಾಗದೇ ಹಲವರು ಒಳಗೊಳಗೇ ಕೊರಗುತ್ತಿದ್ದಾರೆ. ಹೀಗಾಗಿ ಕಿರುತೆರೆ ವಾಹಿನಿಗಳು ಡಬ್ಬಿಂಗ್ ಬಿಟ್ಟು ನಮ್ಮ ಕಲಾವಿದರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಿದೆ.