Publish Date: Wed, 05 Apr 2023 (16:34 IST)
Updated Date: Wed, 05 Apr 2023 (16:36 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಳಿಗೆ ಈಗ ಸ್ಪಷ್ಟ ಉತ್ತರ ಸಿಕ್ಕಿದೆ. ತಮ್ಮ ಗಾಡ್ ಫಾದರ್ ಆಗಿದ್ದ ಸಿಎಂ ಬಸವರಾಜ ಬೊಮ್ಮಾಯಿಗೆ ತಮ್ಮ ಬೆಂಬಲವಿರಲಿದೆ ಎಂದು ಸುದೀಪ್ ಘೋಷಿಸಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಸುಧಾಕರ್, ಅಶೋಕ್ ಮುಂತಾದ ಬಿಜೆಪಿ ನಾಯಕರೊಂದಿಗೆ ಇಂದು ಸುದ್ದಿಗೋಷ್ಠಿ ನಡೆಸಿರುವ ಕಿಚ್ಚ ಸುದೀಪ್, ಈ ಬಾರಿ ಚುನಾವಣೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿಗೆ ತಮ್ಮ ಬೆಂಬಲವಿರಲಿದೆ ಎಂದಿದ್ದಾರೆ. ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ಸುದೀಪ್ ಕೆಲಸ ಮಾಡಲಿದ್ದಾರೆ.
ನಾನು ಚಿತ್ರರಂಗಕ್ಕೆ ಬಂದಾಗ ಕೆಲವೇ ಕೆಲವರು ನನ್ನ ಪರ ನಿಂತಿದ್ದರು. ಆಗ ಜೊತೆಗಿದ್ದವರು ಮಾಮ ಸಿಎಂ ಬೊಮ್ಮಾಯಿ. ಹೀಗಾಗಿ ಇಂದು ನಾನು ಅವರ ಪರವಾಗಿ ನಿಲ್ಲಲು ಬಂದೆ ಎಂದಿದ್ದಾರೆ. ಒಬ್ಬ ತಂದೆಯ ಮಾತು ಕೇಳುವ ರೀತಿ ಅವರ ಮಾತು ಕೇಳುತ್ತೇನೆ. ಅವರು ಎಲ್ಲಿ ಹೇಳುತ್ತಾರೋ ಅಲ್ಲಿ ಕೆಲಸ ಮಾಡುತ್ತೇನೆ. ನಾನು ಇಲ್ಲಿ ಪಕ್ಷ ನೋಡಿ ಬಂದಿಲ್ಲ. ಬೊಮ್ಮಾಯಿ ಮಾಮ ಯಾವ ಪಕ್ಷದಲ್ಲಿರುತ್ತಿದ್ದರೂ ಅವರ ಪರವಾಗಿ ನಿಲ್ಲುತ್ತಿದ್ದೆ. ಇನ್ನು ಕೆಲವು ಸ್ನೇಹಿತರು ಇಲ್ಲಿದ್ದಾರೆ. ಅವರ ಪರ ನಿಲ್ಲಲಿದ್ದೇನೆ ಎಂದು ಸುದೀಪ್ ಹೇಳಿದ್ದಾರೆ.
ಆದರೆ ಅಧಿಕೃತವಾಗಿ ಪಕ್ಷಕ್ಕೆ ಸುದೀಪ್ ಸೇರ್ಪಡೆಯಾಗಿಲ್ಲ. ಆದರೆ ಒಬ್ಬ ಸ್ಟಾರ್ ಪ್ರಚಾರಕರಾಗಿ ಈ ಚುನಾವಣೆಯಲ್ಲಿ ಬಿಜೆಪಿಗೆ ಸುದೀಪ್ ಬೆಂಬಲ ಕೊಡಲಿದ್ದಾರೆ.