ಬೆಂಗಳೂರು: ಕಿಚ್ಚ ಸುದೀಪ್ ತಾವು ನೀಡದೇ ಇರುವ ಹೇಳಿಕೆಯಿಂದಾಗಿ ವಿವಾದಕ್ಕೀಡಾಗಿದ್ದಾರೆ. ಯಾರೋ ಕಿಡಿಗೇಡಿಗಳು ಮಾಡಿದ ಒಂದು ಎಡಿಟ್ ನಿಂದಾಗಿ ಸುದೀಪ್ ಮತ್ತು ಯಶ್ ಅಭಿಮಾನಿಗಳು ಕಿತ್ತಾಡುವಂತಾಗಿದೆ.
ಕೆಜಿಎಫ್ 2 ಸಿನಿಮಾ ಯಶಸ್ಸಿನ ಬಗ್ಗೆ ಸುದೀಪ್ ಸಂದರ್ಶನವೊಂದರಲ್ಲಿ ಪ್ರಶ್ನೆ ಕೇಳಲಾಗಿತ್ತು. ಕೆಜಿಎಫ್ ಸಿನಿಮಾ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಿ ಎಂದಾಗ ನಾನು ಆ ಸಿನಿಮಾದಲ್ಲಿ ನಟಿಸಿಲ್ಲ ಎಂದು ಸುದೀಪ್ ಹೇಳಿದ್ದಾರೆ ಎಂಬರ್ಥದಲ್ಲಿ ವಿಡಿಯೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಯಾರೋ ಹರಿಯಬಿಟ್ಟಿದ್ದಾರೆ. ಅಸಲಿಗೆ ಸುದೀಪ್ ಕೆಜಿಎಫ್ 2 ಬಗ್ಗೆ ಯಾವುದೇ ಹೇಳಿಕೆ ನೀಡಿರಲಿಲ್ಲ. ಹಾಗಿದ್ದರೂ ಹಳೆಯ ವಿಡಿಯೋವನ್ನು ಎಡಿಟ್ ಮಾಡಿ ಯಾರೋ ಈ ರೀತಿ ವಿವಾದ ಸೃಷ್ಟಿಸಿದ್ದಾರೆ.
ಇದರಿಂದಾಗಿ ರಾಕಿಂಗ್ ಸ್ಟಾರ್ ಯಶ್ ಮತ್ತು ಸುದೀಪ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಡುವಂತಾಗಿದೆ. ಆದರೆ ಈ ಬಗ್ಗೆ ಸುದೀಪ್ ಕಡೆಯಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ.