ಬೆಂಗಳೂರು: ಕೆಜಿಎಫ್ ಸಿನಿಮಾ ಫಿವರ್ ದಿನೇ ದಿನೇ ಹೆಚ್ಚುತ್ತಿದೆಯೇ ಹೊರತು, ಕಡಿಮೆಯಂತೂ ಆಗಿಲ್ಲ ಎನ್ನುವುದು ಇತ್ತೀಚೆಗಿನ ವರದಿಗಳಿಂದ ತಿಳಿದುಬಂದಿದೆ.
ಮಾರುಕಟ್ಟೆ ತಜ್ಞ ತರುಣ್ ಆದರ್ಶ್ ವಿಶ್ಲೇಷಣೆ ಪ್ರಕಾರ ಶಾರುಖ್ ಖಾನ್ ಅಭಿನಯದ ಜೀರೋ ಚಿತ್ರದ ಗಳಿಕೆ ದಿನೇ ದಿನೇ ಕೆಳಮುಖವಾಗಿ ಸಾಗುತ್ತಿದೆ. ಆದರೆ ಕೆಜಿಎಫ್ ದಿನೇ ದಿನೇ ಗಳಿಕೆಯಲ್ಲಿ ಮೇಲ್ಮುಖವಾಗಿ ಸಾಗುತ್ತಿದೆ ಎನ್ನಲಾಗಿದೆ. ಕೆಜಿಎಫ್ ಸಿನಿಮಾ ಬಗ್ಗೆ ಈಗಾಗಲೇ ವೀಕ್ಷಿಸಿದವರು, ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದರಿಂದ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿ ಥಿಯೇಟರ್ ಗೆ ಜನ ಬರುವಂತಾಗಿದೆ.
ಅದರಲ್ಲೂ ಹೇಳಿ ಕೇಳಿ ನಿನ್ನೆ ಭಾನುವಾರ. ರಜಾ ದಿನದಂದು ಸಿನಿಮಾ ವೀಕ್ಷಕರ ಸಂಖ್ಯೆ ಹೆಚ್ಚಾಗಿದ್ದು, ಸಹಜವಾಗಿಯೇ ಗಳಿಕೆಯಲ್ಲೂ ಏರಿಕೆಯಾಗಿದೆ. ಅದರಲ್ಲೂ ಹಿಂದಿ ಅವತರಣಿಕೆಯಲ್ಲೇ ಭಾನುವಾರ 5 ಕೋಟಿ ರೂ.ಗೂ ಅಧಿಕ ಗಳಿಕೆ ಮಾಡಿದೆ. ಎಲ್ಲಾ ಶೋಗಳೂ ಭರ್ತಿಯಾಗಿವೆ. ಮೊದಲ ದಿನಕ್ಕೆ ಹೋಲಿಸಿದರೆ ನಿನ್ನೆ ಹೆಚ್ಚು ಗಳಿಕೆಯಾಗಿದೆ ಎನ್ನಲಾಗಿದೆ. ಒಟ್ಟಾರೆಯಾಗಿ ಮೂರು ದಿನದಿಂದ ಕೆಜಿಎಫ್ ಅಂದಾಜು 60 ಕೋಟಿ ಗಳಿಕೆ ಮಾಡಿದೆ. ಆದರೆ ಜೀರೋ ಗಳಿಕೆ ಕೇವಲ 38 ಕೋಟಿ ರೂ. ಎಂದು ತಿಳಿದುಬಂದಿದೆ. ಅಲ್ಲಿಗೆ ಬಾಲಿವುಡ್ ನಲ್ಲೂ ಕೆಜಿಎಫ್ ಶೈನ್ ಆಗಿದೆ ಎಂಬುದು ಪಕ್ಕಾ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ