ಬೆಂಗಳೂರು: ಕನ್ನಡ ಕಿರುತೆರೆ ವಾಹಿನಿಯಲ್ಲಿ ಕನ್ನಡ ಧಾರವಾಹಿಗಳನ್ನು ನಿಲ್ಲಿಸಿ ಡಬ್ಬಿಂಗ್ ಧಾರವಾಹಿಗಳಿಗೆ ಅನುವು ಮಾಡಿಕೊಡುತ್ತಿರುವುದರ ಬಗ್ಗೆ ದಿನೇ ದಿನೇ ಆಕ್ರೋಶ ಹೆಚ್ಚಾಗುತ್ತಿದೆ.
ಮೊನ್ನೆಯಷ್ಟೇ ನಟ ತೇಜಸ್ ಡಬ್ಬಿಂಗ್ ಧಾರವಾಹಿಗಳ ಬಗ್ಗೆ ಬಹಿರಂಗ ಧ್ವನಿಯೆತ್ತಿದ್ದರು. ಇದೀಗ ಕಿರುತೆರೆ ಬರಹಗಾರ ಸಚೇತ್ ಭಟ್ ಎಂಬವರು ತಮ್ಮ ಸಾಮಾಜಿಕ ಜಾಲತಾಣ ಪುಟದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಬ್ಬಿಂಗ್ ಧಾರವಾಹಿಗಳನ್ನು ಪ್ರೋತ್ಸಾಹಿಸುವವರಿಗೆ ಕೆಲವು ವಿಚಾರಗಳು ಅರ್ಥವಾಗುವುದೇ ಇಲ್ಲ. ನೂರಾರು ಕನ್ನಡ ಕಲಾವಿದರು, ತಂತ್ರಜ್ಞರು ಇಂದು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಲಾಕ್ ಡೌನ್ ಮುಗಿದ ಬಳಿಕ ಕೆಲಸ ಸಿಗುತ್ತದೆ ಎಂಬ ಖುಷಿಯಲ್ಲಿದ್ದವರಿಗೆ ಕಹಿ ಗುಳಿಗೆ ಸಿಕ್ಕಿದೆ. ಹಿಂದಿ ಧಾರವಾಹಿಗಳ ಗುಣಮಟ್ಟಕ್ಕೆ ತಕ್ಕಂತೆ ಧಾರವಾಹಿ ಮಾಡಲು ನಮಗೂ ತಾಕತ್ತು ಇದೆ. ಆದರೆ ಅದಕ್ಕೆ ಅವಕಾಶ ಸಿಗಬೇಕಲ್ಲವೇ?
ಇಷ್ಟು ದಿನ ನಿಮಗೆ ಲಾಭ ಮಾಡಿಕೊಡಲು ಕನ್ನಡಿಗರೇ ಬೇಕಾಗಿತ್ತು. ಈಗ ಲಾಕ್ ಡೌನ್ ನಲ್ಲಿ ಬ್ಯುಸಿನೆಸ್ ಗಾಗಿ ಡಬ್ಬಿಂಗ್ ಧಾರವಾಹಿಗಳ ಹಿಂದೆ ಬಿದ್ದಿರುವುದು ಸರಿಯೇ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಆಕ್ರೋಶ ಮತ್ತಷ್ಟು ಹೆಚ್ಚಾಗುವ ಸಾಧ‍್ಯತೆಯಿದೆ.