ಬೆಂಗಳೂರು: ಬಹುದಿನಗಳ ಅನಾರೋಗ್ಯದಿಂದ ನಿನ್ನೆ ಮೃತಪಟ್ಟಿದ್ದ ನಟ, ಮಾಜಿ ಐಎಎಸ್ ಅಧಿಕಾರಿ ಕೆ ಶಿವರಾಮ್ ಪಾರ್ಥಿವ ಶರೀರವನ್ನು ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕಿಡಲಾಗಿದೆ.
ಇಂದು ಸ್ಯಾಂಡಲ್ ವುಡ್ ಕಲಾವಿದರು, ಸ್ನೇಹಿತರು ಶಿವರಾಮ್ ಅಂತಿಮ ದರ್ಶನ ಪಡೆಯಲಿದ್ದಾರೆ. ಬಳಿಕ ಬಿಡದಿ ಸಮೀಪದ ಉರಗಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ನಿನ್ನೆ ಸಂಜೆ 4.15 ಕ್ಕೆ ಕೆ ಶಿವರಾಮ್ ಮೃತರಾದ ಸುದ್ದಿಯನ್ನು ಅವರ ಅಳಿಯ ಪ್ರದೀಪ್ ತಿಳಿಸಿದ್ದರು.
ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೊನ್ನೆಯಷ್ಟೇ ಅವರಿಗೆ ಹೃದಯಾಘಾತ ಮತ್ತು ಮೆದುಳು ನಿಷ್ಕ್ರಿಯವಾಗಿದ್ದ ಬಗ್ಗೆ ಮಾಹಿತಿ ಕೇಳಿಬಂದಿತ್ತು. ಬಹುಅಂಗಾಂಗ ವೈಫಲ್ಯಕ್ಕೊಳಗಾದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಅವರ ಮೃತದೇಹವನ್ನು ಮೊದಲು ರಾಜಾಜಿನಗರದ ಅವರ ನಿವಾಸಕ್ಕೆ ಕರೆತರಲಾಯಿತು. ಇಲ್ಲಿ ಕುಟುಂಬಸ್ಥರು ಪೂಜೆ ಸಲ್ಲಿಸಿದ ಬಳಿಕ ಅಂತಿಮ ದರ್ಶನಕ್ಕಾಗಿ ರವೀಂದ್ರ ಕಲಾಕ್ಷೇತ್ರಕ್ಕೆ ಕರೆತರಲಾಗಿದೆ. ಮೃತದೇಹಕ್ಕೆ ಪೂಜೆ ಸಲ್ಲಿಸುವ ವೇಳೆ ಅವರ ಪತ್ನಿ ತೀವ್ರ ದುಃಖತಪ್ತರಾಗಿದ್ದರು.
ಕನ್ನಡದಲ್ಲೇ ಐಎಎಸ್ ಪರೀಕ್ಷೆ ಬರೆದು ಅಧಿಕಾರಿಯಾದ ಹೆಗ್ಗಳಿಕೆಗೆ ಕೆ ಶಿವರಾಮ್ ಅವರದ್ದಾಗಿತ್ತು. ನಟನೆ ಮೇಲಿನ ಆಸಕ್ತಿಯಿಂದ ಸರ್ಕಾರಿ ಕೆಲಸ ಬಿಟ್ಟು ಬಣ್ಣ ಹಚ್ಚಿದ್ದರು. ಬಳಿಕ ಬಿಜೆಪಿ ಪಕ್ಷ ಸೇರಿಕೊಂಡು ರಾಜಕೀಯದಲ್ಲೂ ಸೇವೆ ಸಲ್ಲಿಸಿದ್ದರು. ಕಳೆದ ಕೆಲವು ವರ್ಷಗಳಿಂದ ಬಣ್ಣದ ಬದುಕಿನಿಂದ ದೂರವಿದ್ದರು.