ಪ್ರಜ್ವಲ್ ದೇವರಾಜ್ ಇದುವರೆಗೂ ಒಂದಷ್ಟು ಬಗೆಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಿದ್ದಾರೆ. ಯಾವುದೇ ಪಾತ್ರಗಳಿಗಾದರೂ ಸೈ ಎಂಬಂತೆ ನಟಿಸುವ ಕಸುವು ಹೊಂದಿರುವ ಪ್ರಜ್ವಲ್ಗೆ ತಕ್ಕುದಾದ ಪಾತ್ರಗಳೇ ಇತ್ತೀಚಿನ ದಿನಗಳಲ್ಲಿ ಒಲಿದು ಬರಲಾರಂಭಿಸಿವೆ.
ಮದುವೆಯಾದ ನಂತರದಲ್ಲಿ ಏಕಕಾಲದಲ್ಲಿಯೇ ಹಲವಾರು ಸಿನಿಮಾಗಳನ್ನು ಒಪ್ಪಿಕೊಂಡು ಮುಂದುವರೆಯುತ್ತಿರುವ ಪ್ರಜ್ವಲ್ ನಟಿಸಿರೋ ಬಿಡುಗಡೆಯ ಹಾದಿಯಲ್ಲಿರೋ ಸಿನಿಮಾಗಳಲ್ಲಿ ಜಂಟಲ್ ಮನ್ ಬಹು ಮುಖ್ಯವಾಗಿ ಪರಿಗಣಿಸಲ್ಪಟ್ಟಿದೆ. ವಿಶಿಷ್ಟವಾದ ಕಥಾ ಹಂದರವನ್ನೊಳಗೊಂಡಿರುವ ಈ ಚಿತ್ರದ ಲಿರಿಕಲ್ ಸಾಂಗ್ ಇದೇ ತಿಂಗಳ ಹದಿನೆಂಟನೇ ತಾರೀಕಿನಂದು ಬಿಡುಗಡೆಯಾಗಲಿದೆ.
ಇದು ಇತ್ತೀಚೆಗೆ ನಿರ್ಮಾಪಕರಾಗಿಯೂ ಪಾದಾರ್ಪಣೆ ಮಾಡಿರುವ ಖ್ಯಾತ ನಿರ್ದೇಶಕ ಗುರು ದೇಶಪಾಂಡೆ ನಿರ್ಮಾಣ ಮಾಡಿರುವ ಚಿತ್ರ. ಅವರು ಜಿ ಸಿನಿಮಾಸ್ ಬ್ಯಾನರ್ನಡಿಯಲ್ಲಿ ಮಹತ್ವಾಕಾಂಕ್ಷೆಯಿಂದ ನಿರ್ಮಾಣ ಮಾಡಿರುವ ಜಂಟಲ್ ಮನ್ ಇದೀಗ ಬಹು ನಿರೀಕ್ಷಿತ ಚಿತ್ರವಾಗಿ ಹೊರಹೊಮ್ಮಿರೋದು ಅದರ ಭಿನ್ನವಾದ ಕಂಟೆಂಟಿನ ಕಾರಣದಿಂದ. ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸಿರುವ ಈ ಸಿನಿಮಾವನ್ನು ಜಡೇಶ್ ಕುಮಾರ್ ಹಂಪಿ ನಿರ್ದೇಶನ ಮಾಡಿದ್ದಾರೆ. ಅವರು ತಮ್ಮ ಚೊಚ್ಚಲ ಪ್ರಯತ್ನದಲ್ಲಿಯೇ ತೀರಾ ವಿಶೇಷವಾದ, ಈ ವರೆಗೆ ಯಾರೂ ಗಮನ ಹರಿಸದಿದ್ದ ಕಥೆಯೊಂದನ್ನು ಕೈಗೆತ್ತಿಕೊಂಡಿದ್ದಾರೆ.
ಪ್ರಜ್ವಲ್ ದೇವರಾಜ್ ಅವರ ಪಾಲಿಗೂ ಕೂಡಾ ಇದೊಂದು ವಿಶೇಷವಾದ ಚಿತ್ರ. ಯಾಕೆಂದರೆ ಅವರಿಲ್ಲಿ ಇಡೀ ವಿಶ್ವದಲ್ಲಿ ಬೆರಳೆಣಿಕೆ ಮಂದಿಯನ್ನು ಮಾತ್ರವೇ ಕಾಡಬಹುದಾದ ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್ ಎಂಬ ವಿಚಿತ್ರ ಕಾಯಿಲೆ ಬಾಧಿತ ಯುವಕನ ಪಾತ್ರದಲ್ಲಿ ಪ್ರಜ್ವಲ್ ನಟಿಸಿದ್ದಾರೆ. ಅದು ದಿನದ ಹದಿನೆಂಟು ಗಂಟೆಗಳ ಕಾಲವೂ ಮಲಗಿಯೇ ಇದ್ದು ಮಿಕ್ಕುಳಿದ ಆರು ಘಂಟೆಯಲ್ಲಿ ಬದುಕು ನಡೆಸುವಂಥಾ ಸ್ಥಿತಿ. ಅದರ ಸುತ್ತಾ ರೋಚಕ ಕಥೆ ಹೆಣೆದು ಜಡೇಶ್ ಕುಮಾರ್ ಜಂಟಲ್ ಮನ್ನನ್ನು ರೂಪಿಸಿದ್ದಾರಂತೆ. ಈ ಕಥೆಯ ತಾಜಾತನಕ್ಕೆ ಮನಸೋತೇ ಗುರು ದೇಶಪಾಂಡೆ ಇದನ್ನು ನಿರ್ಮಾಣ ಮಾಡಿದ್ದಾರೆ. ಇನ್ನೇನು ಇದರ ಲಿರಿಕಲ್ ವಿಡಿಯೋ ಬಿಡುಗಡೆಯಾಗಲಿದೆ. ಮುಂದಿನ ವರ್ಷದ ಮೊದಲ ತಿಂಗಳಲ್ಲಿಯೇ ಜಂಟಲ್ ಮನ್ ಪ್ರೇಕ್ಷಕರ ಮುಂದೆ ಬರಲಿದ್ದಾನೆ.