ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ 2 ಸಿನಿಮಾ ಬಳಿಕ ತಮ್ಮ ಮುಂದಿನ ಸಿನಿಮಾ ಘೋಷಣೆ ಮಾಡಬಹುದು ಎಂದು ಅಭಿಮಾನಿಗಳು ಒಂದು ವರ್ಷದಿಂದ ಕಾಯುತ್ತಲೇ ಇದ್ದಾರೆ. ಆದರೆ ಇದುವರೆಗೆ ಅದು ನನಸಾಗಿಲ್ಲ.
ಯಶ್ ದಸರಾ ವೇಳೆ ಹೊಸ ಸಿನಿಮಾ ಘೋಷಣೆ ಮಾಡಬಹುದು ಎಂದು ಸುದ್ದಿಯಾಗಿತ್ತು. ಅದು ಸುಳ್ಳಾಯಿತು. ಬಳಿಕ ಕೆಜಿಎಫ್ 2 ನೂರು ದಿನ ಆಚರಿಸಿದ ಬಳಿಕ ಘೋಷಣೆ ಮಾಡಬಹುದು ಎಂದು ಸುದ್ದಿಯಾಗಿತ್ತು. ಅದೂ ಸುಳ್ಳಾಯಿತು. ಯಶ್ ಲಕ್ಕಿ ತಿಂಗಳು ಡಿಸೆಂಬರ್ ನಲ್ಲೂ ಯಾವುದೇ ಘೋಷಣೆ ಹೊರಬರುವ ಸೂಚನೆ ಕಾಣುತ್ತಿಲ್ಲ.
ಇದರಿಂದ ಯಶ್ ಅಭಿಮಾನಿಗಳು ಹತಾಶೆಗೊಳಗಾಗಿದ್ದಾರೆ. ಈ ನಡುವೆ ಅವರು ತಮ್ಮದೇ ಪ್ರೊಡಕ್ಷನ್ ಹೌಸ್ ಹುಟ್ಟುಹಾಕಿ ಅದರ ಮೂಲಕವೇ ಹೊಸ ಸಿನಿಮಾ ಘೋಷಣೆ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದುವರೆಗೆ ಆ ಬಗ್ಗೆಯೂ ಯಶ್ ಕಡೆಯಿಂದ ಯಾವುದೇ ಮಾಹಿತಿ ಇಲ್ಲ. ಯಶ್ 19 ನೇ ಸಿನಿಮಾ ಬಗ್ಗೆ ಕೇಳಿದಾಗಲೆಲ್ಲಾ ಕಾದು ನೋಡಿ ಎಂದಷ್ಟೇ ಉತ್ತರ ಬರುತ್ತಿದೆ. ಮುಂದಿನ ತಿಂಗಳು ಯಶ್ ಹುಟ್ಟುಹಬ್ಬವಿದ್ದು ಆಗಲಾದರೂ ಹೊಸ ಸಿನಿಮಾ ಘೋಷಣೆಯಾಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.