ಬೆಂಗಳೂರು: ಬಿಗ್ ಬಾಸ್ ಆಯೋಜಕರಿಂದ ಕಿಚ್ಚ ಸುದೀಪ್ ಗೆ ಅವಮಾನವಾಗಿದೆ. ಈ ಕಾರಣಕ್ಕೆ ಅವರು ಮುಂದಿನ ಸೀಸನ್ ನಿಂದ ಶೋ ಬಿಡಲು ನಿರ್ಧರಿಸಿದ್ದಾರೆ ಎಂಬ ಆರೋಪಗಳಿಗೆ ಸ್ವತಃ ಸುದೀಪ್ ಸ್ಪಷ್ಟನೆ ನೀಡಿದ್ದಾರೆ.
ಕಿಚ್ಚ ಸುದೀಪ್ ಮತ್ತು ಬಿಗ್ ಬಾಸ್ ನ ಪರಭಾಷಾ ಆಯೋಜಕರ ನಡುವೆ ಭಿನ್ನಾಭಿಪ್ರಾಯಗಳಾಗಿತ್ತು. ಈ ಕಾರಣಕ್ಕೆ ಬೇಸರಗೊಂಡು ಕಿಚ್ಚ ಶೋ ಬಿಡುವ ನಿರ್ಧಾರ ಮಾಡಿದರು ಎಂದು ಬಿಗ್ ಬಾಸ್ ಮಾಜಿ ಸ್ಪರ್ಧಿ, ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಆರೋಪಿಸಿದ್ದರು.
ಜೊತೆಗೆ ಈಗ ನಾವು ಮಾತನಾಡಿ ಎಲ್ಲಾ ಸರಿಮಾಡಿದ್ದೇವೆ. ಬಿಗ್ ಬಾಸ್ ಆಯೋಜಕರು ತಪ್ಪು ಸರಿಪಡಿಸುವುದಾಗಿ ಹೇಳಿದ್ದಾರೆ ಎಂದು ರೂಪೇಶ್ ಬಳಿಕ ಮತ್ತೊಂದು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದರು. ಇದರಿಂದಾಗಿ ನಾನಾ ಊಹಾಪೋಹಗಳು ಹರಿದಾಡಿದವು. ಆದರೆ ಕಿಚ್ಚ ಶೋ ಬಿಟ್ಟಿದ್ದ ಕಾರಣವೇನೆಂದು ಅವರೇ ನೇರವಾಗಿ ಹೇಳಿಲ್ಲ. ಆದರೆ ರೂಪೇಶ್ ಟ್ವೀಟ್ ಮೂಲಕ ಹೀರೋ ಆದರು.
ತಮ್ಮ ಬಗ್ಗೆ ಇಷ್ಟೆಲ್ಲಾ ರದ್ದಾಂತ ಆಗಿರುವಾಗ ಅನಿವಾರ್ಯವಾಗಿ ಸುದೀಪ್ ಟ್ವೀಟ್ ಮಾಡಿ ಸ್ಪಷ್ಟನೆ ನೀಡಬೇಕಾಗಿ ಬಂದಿದೆ. ನಿಮ್ಮೆಲ್ಲರ ಪ್ರೀತಿ, ಬೆಂಬಲಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಆದರೆ ಕಾಮೆಂಟ್, ವಿಡಿಯೋ ಮೂಲಕ ನನ್ನ ಮತ್ತು ಚಾನೆಲ್ ನಡುವೆ ಅವಮಾನಕರ ಘಟನೆಯಾಗಿದೆ ಎಂದು ಬಿಂಬಿಸುತ್ತಿರುವವರಿಗೆ ಪ್ರಶ್ನೆ ಮಾಡಲು ಬಯಸುತ್ತೇನೆ. ನನ್ನ ಮತ್ತು ಕಲರ್ಸ್ ನಡುವೆ ಉತ್ತಮ ಬಾಂಧವ್ಯವಿದೆ. ಅದಕ್ಕೆ ಅವಮಾನ ಎಂಬ ಕಳಂಕವನ್ನು ಮೆತ್ತಬೇಡಿ. ಈ ಬಗ್ಗೆ ಯಾವುದೇ ಊಹಾಪೋಹ ಹಬ್ಬದ್ದರೂ ಅದು ನಿಜವಲ್ಲ. ಕಲರ್ಸ್ ನವರು ಯಾವತ್ತೂ ನನ್ನನ್ನು ಗೌರವಯುತವಾಗಿ ನಡೆಸಿಕೊಂಡಿದ್ದಾರೆ. ನಿರ್ದೇಶಕ ಪ್ರಕಾಶ್ ಉತ್ಸಾಹೀ, ಪ್ರತಿಭಾವಂತ ವ್ಯಕ್ತಿ, ಆತನ ಮೇಲೆ ನನಗೆ ಅಪಾರ ಗೌರವವಿದೆ. ನನ್ನ ತಂಡದ ಬಗ್ಗೆ ಇಲ್ಲಸಲ್ಲದ ಅಪವಾದ, ಊಹಾಪೋಹಗಳು ಹಬ್ಬುತ್ತಿರುವಾಗ ಸುಮ್ಮನೇ ಕೂತು ನೋಡುತ್ತಾ ಕೂರವ ವ್ಯಕ್ತಿ ನಾನಲ್ಲ ಎಂದು ಸುದೀಪ್ ಖಡಕ್ ಆಗಿ ಪ್ರತಿಕ್ರಿಯಿಸಿ ಎಲ್ಲರ ಬಾಯಿ ಬಂದ್ ಮಾಡಿದ್ದಾರೆ.