ಬೆಂಗಳೂರು: ಮೊನ್ನೆಯಷ್ಟೇ ನಿಧನರಾದ ಹಿರಿಯ ನಟಿ ಬಿ. ಜಯಮ್ಮ ಮೃತದೇಹ ರಸ್ತೆ ಪಕ್ಕದಲ್ಲಿ ಅನಾಥವಾಗಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದರ ಬಗ್ಗೆ ಕುಟುಂಬಸ್ಥರೇ ಸ್ಪಷ್ಟನೆ ನೀಡಿದ್ದಾರೆ.
ಕನ್ನಡದಲ್ಲಿ ಹಲವು ಸಿನಿಮಾ, ಧಾರವಾಹಿಗಳಲ್ಲಿ ನಟಿಸಿದ ಹಿರಿಯ ನಟಿ ಮೃತದೇಹ ಕಸದ ರಾಶಿಯ ಪಕ್ಕ, ರಸ್ತೆ ಬದಿಯಲ್ಲಿ ಇಡಲಾಗಿರುವ ದೃಶ್ಯವನ್ನು ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಅವಿವಾಹಿತರಾಗಿದ್ದ ಜಯಮ್ಮ ಅಂತ್ಯ ಸಂಸ್ಕಾರ ಮಾಡಲು ಕುಟುಂಬಸ್ಥರೂ ಬಂದಿಲ್ಲ. ಹಿರಿಯ ನಟ ಶವ ಅನಾಥವಾಗಿದೆ ಎಂದು ಆರೋಪ ಕೇಳಿಬಂದಿತ್ತು.
ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಯಾ ಸಹೋದರನ ಪುತ್ರಿ ಕೊವಿಡ್ ನಿಂದಾಗಿ ಅವರ ಅಂತ್ಯಸಂಸ್ಕಾರಕ್ಕೆ ಯಾರೂ ಬರುವುದು ಬೇಡ ಎಂದು ನಾವೇ ಹೇಳಿದ್ದೆವು. 11.30 ರಿಂದ 12 ಗಂಟೆಯವರೆಗೆ ನಮಗೆ ಸ್ಮಶಾನದಲ್ಲಿ ಸಮಯ ನಿಗದಿಯಾಗಿತ್ತು. ಆದರೆ ಒಳಗಡೆ ನಮ್ಮ ಸಂಪ್ರದಾಯ ಪ್ರಕಾರ ವಿಧಿ ವಿಧಾನ ಮಾಡಲು ಅವಕಾಶವಿರಲಿಲ್ಲ. ಹೀಗಾಗಿ ಅಲ್ಲಿನ ನಿಯಮದ ಪ್ರಕಾರ ಹೊರಗಡೆಯೇ ಪೂಜೆ ಮಾಡಬೇಕಾಯ್ತು.ಹಾಗಾಗಿ ರಸ್ತೆ ಪಕ್ಕದಲ್ಲೇ ಪೂಜೆ ಮಾಡಿದ್ವಿ. ಇದನ್ನೇ ಯಾರೋ ವಿಡಿಯೋ ಮಾಡಿ ಅಪಪ್ರಚಾರ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.