ಕನ್ನಡ ಚಿತ್ರರಂಗದಲ್ಲಿ ಗೀತ ರಚನೆಕಾರ, ಚಿತ್ರ ಸಾಹಿತಿ ಮತ್ತು ನಿರ್ದೇಶಕ ಡಾ ವಿ ನಾಗೇಂದ್ರ ಪ್ರಸಾದ್ ಒಂದು ದೊಡ್ಡ ಹೆಸರು.
ಪ್ರಸಾದ್ ಅವರು ಡಾ ರಾಜ್ ಕುಟುಂಬದ ಒಡನಾಡಿ ಮತ್ತು ಪುನೀತ್ ರಾಜಕುಮಾರ್ ಅವರ ಬಗ್ಗೆ ಅತೀವ ಅಭಿಮಾನ ಇಟ್ಟುಕೊಂಡವರು. ಟಿವಿ9 ಡಿಜಿಟಲ್ ಎಡಿಟೋರಿಯಲ್ ವರದಿಗಾರ್ತಿಯೊಂದಿಗೆ ಸೋಮವಾರ ಮಾತಾಡಿದ ಪ್ರಸಾದ್ ಅವರು ಅಪ್ಪು ಬಗ್ಗೆ ತಮ್ಮ ಅಂತರಾಳವನ್ನು ತೆರೆದಿಟ್ಟರು. ಅವರು ಹೇಳುವ ಹಾಗೆ ಪುನೀತ್ ಅವರಿಗೆ ಡಾ ರಾಜ್ ಅವರ ಮಗನಾಗಿದ್ದರೂ ತಮ್ಮದೇ ಆದ ಐಡೆಂಟಿಟಿಯನ್ನು ಸ್ಥಾಪಿಸುವ ಛಲವಿತ್ತಂತೆ, ಆ ಛಲದ ಫಲವಾಗಿಯೇ ಅವರು ಅತ್ಯುತ್ತಮ ನಟ ಮತ್ತು ಡ್ಯಾನ್ಸರ್ ಆಗಿ ಗುರುತಿಸಿಕೊಂಡರು. ಅಣ್ಣಾವ್ರ ಮಗನಾಗಿ ಹುಟ್ಟಿದ್ದು ತನ್ನ ಅದೃಷ್ಟ ಆದರೆ ಹಾಗೆ ಕರೆಸಿಕೊಳ್ಳಲು ಅರ್ಹತೆ ಸಂಪಾದಿಸಿಕೊಳ್ಳಬೇಕು ಅಂತ ಅವರು ಹೇಳಿದ್ದರಂತೆ.
ಪುನೀತ್ ಬಗ್ಗೆ ತಮ್ಮ ಅನಿಸಿಕೆಯನ್ನು ಪ್ರಸಾದ್ ಅವರು ಬಹಳ ಅದ್ಭುತವಾಗಿ ಹಂಚಿಕೊಂಡಿದ್ದಾರೆ. ಬಾಂಧವ್ಯಗಳು ಮತ್ತು ಸಂಬಂಧಗಳು ಇರುವವರೆಗೆ ಅಪ್ಪುಗೆಗಳಿರುತ್ತವೆ ಮತ್ತು ಎಲ್ಲಿಯವರೆಗೆ ಅಪ್ಪುಗೆಗಳಿರುತ್ತವೆಯೋ ಅಲ್ಲಿವರೆಗೆ ಅಪ್ಪು ಇರುತ್ತಾರೆ, ಎಂದು ಪ್ರಸಾದ್ ಹೇಳಿದರು.