ದೇಶಿಯ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಅಗ್ರಸ್ಥಾನ ಹೊಂದಿರುವ ಯಮಹಾ ಸಂಸ್ಥೆಯು ಮುಂಬರುವ ದಿನಗಳಲ್ಲಿ ಎರಡು ಹೊಸದಾದ ಬೈಕ್ ಆವೃತ್ತಿಗಳನ್ನು ಪರಿಚಯಿಸುತ್ತಿದೆ. ಫೆಬ್ರುವರಿಯಲ್ಲಿ ನಡೆಯಲಿರುವ 2018ರ ಆಟೋ ಎಕ್ಸ್‌ಪೋದಲ್ಲಿ ಹೊಸ ಬೈಕ್‌ಗಳನ್ನು ಪ್ರದರ್ಶನ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ ಯಮಹಾ ಸಂಸ್ಥೆಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನೂತನ ಮಾದರಿಯ ವೈಝಡ್‌ಎಫ್-ಆರ್15 ಆವೃತ್ತಿಯಾದ 3.0 ಮತ್ತು 125 ಸಿಸಿ ಎಂಜಿನ್ ಸಾಮರ್ಥ್ಯದ ಹೊಸ ಸ್ಕೂಟರ್ ಮಾದರಿಯನ್ನು ಪರಿಚಯಿಸುತ್ತಿದ್ದು, 2018ರ ಆಟೋ ಎಕ್ಸ್‌ಪೋದಲ್ಲಿ ಹೊಸ ಉತ್ಪನ್ನಗಳ ಬಗೆಗೆ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ಸಂಸ್ಥೆಯು ತಿಳಿಸಿದೆ.
ಯಮಹಾ ವೈಝಡ್ಎಫ್-ಆರ್15 ವಿ3
ಈಗಾಗಲೇ ಕಂಪನಿಯು ತನ್ನ ನೂತನ 2 ಆವೃತ್ತಿಗಳನ್ನು ಬಿಡುಗಡೆಗೆ ಸಜ್ಜುಗೊಳಿಸಿದೆ. ಈ ಬೈಕ್ ಈಗಾಗಲೇ ವಿದೇಶದಲ್ಲಿ ಬಾರಿ ಜನಪ್ರಿಯತೆ ಪಡೆದುಕೊಂಡಿದ್ದು ಭಾರತದಲ್ಲೂ ಇದು ಧೂಳೆಬ್ಬಿಸುವ ಎಲ್ಲಾ ಲಕ್ಷಣಗಳನ್ನು ಈ ಬೈಕ್ ಹೊಂದಿದೆ ಎನ್ನಲಾಗುತ್ತಿದೆ. ವರದಿಗಳ ಪ್ರಕಾರ 2018 ಫೆಬ್ರುವರಿಯಲ್ಲಿ ಯಮಹಾ ವೈಝಡ್ಎಫ್ ಆರ್ 15 ವಿ3 ಬಿಡುಗಡೆಗೊಳ್ಳುವ ಸಾಧ್ಯತೆಗಳಿದ್ದು, ಇದರಲ್ಲಿರುವ ಹಲವು ವಿಶೇಷತೆಗಳಿಂದಾಗಿ ಈ ಬೈಕ್ ಗ್ರಾಹಕರ ಗಮನ ಸೆಳೆಯುವುದರಲ್ಲಿ ಎರಡು ಮಾತಿಲ್ಲ ಎಂದೇ ಹೇಳಬಹುದು.
ಈಗಾಗಲೇ ಈ ಬೈಕ್ ಆವೃತ್ತಿಯನ್ನು ವಿದೇಶದಲ್ಲಿ ಬಿಡುಗಡೆ ಮಾಡಿದ್ದು ಅದೇ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು ಕಂಪನಿ ರೂಪಿಸಿದೆ ಎನ್ನಲಾಗಿದೆ. ಈ ಹಿಂದಿನ ಬಿಡುಗಡೆಯಾದ ವಿ2 ಮಾದರಿಯಲ್ಲೇ ಮುಂಭಾಗದ ವಿನ್ಯಾಸವನ್ನು ಹೊಂದಿದ್ದು, ಎಬಿಎಸ್, ಎಂಆರ್‌ಎಫ್ ಟೈರ್ ಸೇರಿದಂತೆ ಹಲವು ಸುಧಾರಿತ ಸುರಕ್ಷಾ ವಿಧಾನಗಳನ್ನು ಈ ಬೈಕ್ ಪಡೆದುಕೊಂಡಿದೆ. ಇದರ ಬೆಲೆಯು ರೂ. 1,45,000 ರಿಂದ ರೂ 1,50,000 ಇರಲಿದೆ ಎಂದು ಅಂದಾಜಿಸಲಾಗಿದೆ.
ಎಂಜಿನ್ ಸಾಮರ್ಥ್ಯ 150 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಜೊತೆ ಫ್ಯೂಲ್ ಇಂಜೆಕ್ಷನ್ ಹೊಂದಿರುವ ವೈಝಡ್ಎಫ್ ಆರ್ 15 ವಿ3 ಮಾದರಿಯು 19.7-ಬಿಎಚ್‌ಪಿ ಮತ್ತು 14.7-ಎನ್ಎಂ ಟಾರ್ಕ್ ಶಕ್ತಿಯನ್ನು ಉತ್ಪಾದನೆ ಮಾಡಬಲ್ಲದು. ಇದಲ್ಲದೇ 6-ಸ್ಪೀಡ್ ಗೇರ್‌ಬಾಕ್ಸ್ ಸೇರಿದಂತೆ ಎಲ್ಇಡಿ ಹೆಡ್‌ಲ್ಯಾಂಪ್, ಸ್ಲಿಪರ್ ಕ್ಲಚ್ ಹೊಂದಿದ್ದು, ಪ್ರತಿ ಲೀ. 40 ಕಿಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ಈ ಬೈಕ್ ಹೊಂದಿದೆ. ಸದ್ಯ ಮಾರುಕಟ್ಟೆಯಲ್ಲಿ ರನ್ ಆಗುತ್ತಿರುವ ಸುಜುಕಿ ಜಿಕ್ಸರ್ ಎಸ್ಎಫ್, ಹೋಂಡಾ ಹಾರ್ನೆಟ್, ಬಜಾಜ್ ಪಲ್ಸರ್ ಬೈಕ್‌ಗಳಿಗೆ ವೈಝಡ್ಎಫ್ ಆರ್ 15 ವಿ3 ಬೈಕ್ ಆವೃತ್ತಿಯು ಟಕ್ಕರ್ ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ಅಷ್ಟೇ ಅಲ್ಲ ಯಮಹಾ ತನ್ನ ಹೊಸ ಮಾದರಿಯ ಸ್ಕೂಟರ್ ಅನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿದ್ದು ಅದಕ್ಕಾಗಿ ಪೂರ್ವತಯಾರಿಯನ್ನು ಸಹ ಮಾಡಿಕೊಂಡಿದೆ ಎನ್ನಲಾಗಿದೆ. ಯಮಹಾ ಸಂಸ್ಥೆಯು ಪರಿಚಯಿಸಲಿರುವ 125 ಸಿಸಿ ಸ್ಕೂಟರ್ ಮಾದರಿಯು ಸದ್ಯ ವಿಯೆಟ್ನಾಂ ದೇಶದಲ್ಲಿ ಮಾರಾಟಗೊಳ್ಳುತ್ತಿರುವ ನೋಜಾ ಗ್ರಾಂಡೆ ಪ್ರೇರಣೆಯೊಂದಿಗೆ ಅಭಿವೃದ್ಧಿ ಮಾಡಲಾಗಿದ್ದು, 8.2-ಬಿಎಚ್‌ಪಿ ಮತ್ತು 9.7ಎನ್ಎಂ ಟಾರ್ಕ್ ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿವೆ.
ಹೀಗಾಗಿ ಮುಂಬರಲಿರುವ ಯಮಹಾದ ಹೊಸ ಆವೃತ್ತಿಯಾದ ಈ ಸ್ಕೂಟರ್ ನಗರ ಪ್ರದೇಶದ ಗ್ರಾಹಕರಿಗೆ ಇಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ. ಈ ಬೈಕ್ ಅನ್ನು ಸುಧಾರಿತ ತಂತ್ರಜ್ಞಾನದೊಂದಿಗೆ ಅಭಿವೃದ್ಧಿ ಪಡಿಸಲಾಗಿದ್ದು ಉತ್ತಮ ಮೈಲೇಜ್ ಕೂಡಾ ನೀಡಬಹುದು ಎಂಬುದು ಮಾರುಕಟ್ಟೆ ತಜ್ಞರ ಅಭಿಫ್ರಾಯವಾಗಿದೆ. ಅಲ್ಲದೇ ಇದರ ಮಾರುಕಟ್ಟೆ ದರವು ಉಳಿದ ಸ್ಕೂಟರ್‌ಗಳಿಗೆ ಹೋಲಿಸಿದರೆ ಕಡಿಮೆ ಇರುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ. ಈ ಸ್ಕೂಟರ್‌ಗಳು ಮಾರ್ಚ್ ಅಥವಾ ಎಪ್ರಿಲ್ ಅಂತ್ಯಕ್ಕೆ ಗ್ರಾಹಕರನ್ನು ತಲುಪಲಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.