ಜಿಲ್ಲೆ ಮಾತ್ರವಲ್ಲ, ಇಡೀ ರಾಜ್ಯ ಈ ವರ್ಷ ಬರದ ಬೇಗುದಿಗೆ ಸಿಲುಕಿದೆ. ಒಂದೆಡೆ ಈರುಳ್ಳಿ ಬೆಳೆದ ರೈತರು ದರ ಕುಸಿತದ ಬಿರುಗಾಳಿಗೆ ಸಿಕ್ಕಿ ನಷ್ಟ ಅನುಭವಿಸುತ್ತಿದ್ದಾರೆ. ಉಳಿದ ಕೃಷಿ ಬೆಳೆಗಳು ಮಳೆಯ ಕೊರತೆಯಿಂದ ಕೈಗೆ ಬಂದಿಲ್ಲ. ಇವೆಲ್ಲ ಸಂಕಷ್ಟಗಳ ನಡುವೆಯೂ ಸ್ವಲ್ಪ ಜಮೀನಿನಲ್ಲಿಯೇ ಸುಗಂಧರಾಜ ಪುಷ್ಪ ಕೃಷಿಯನ್ನು ಕೈಗೊಂಡು ನಿತ್ಯ ಲಾಭಗಳಿಸುತ್ತ ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ ಕೊಪ್ಪಳ ತಾಲೂಕಿನ ಬೇಳೂರು ಗ್ರಾಮದ ರೈತ ದಾವಲಸಾಬ್.
ತೋಟಗಾರಿಕೆ ಇಲಾಖೆಯ ವತಿಯಿಂದ ನೆರವು ಹಾಗೂ ತಂತ್ರಜ್ಞಾನ ಪಡೆದು, ಪುಷ್ಪಕೃಷಿಯನ್ನು ಯಶಸ್ವಿಯಾಗಿ ಕೈಗೊಂಡು ಉತ್ತಮ ಲಾಭ ಪಡೆಯುತ್ತಿರುವ ರೈತನ ಯಶೋಗಾಥೆಯ ವರದಿಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಕೊಪ್ಪಳ ತಾಲೂಕು ಬೇಳೂರು ಗ್ರಾಮಕ್ಕೆ ವಿಶೇಷ ಮಾಧ್ಯಮ ಅಧ್ಯಯನ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಂಜೆಯ ಹೊತ್ತಿನಲ್ಲಿ ಸುವಾಸನೆಯ ಸುಗಂಧ ಬೀರುತ್ತ, ಮುಖ್ಯವಾಗಿ ಹೂಮಾಲೆಗಳಿಗೆ ಅತ್ಯಾವಶ್ಯಕವಾಗಿ ಬೇಕಾಗಿರುವ ಹೂವು ಸುಗಮಧರಾಜ. ಈ ಹೂವಿಗೆ ಎಲ್ಲೆಡೆ ವ್ಯಾಪಕ ಬೇಡಿಕೆ ಇದೆ. ಸುಗಂಧರಾಜ ಹೂವಿನ ಬೆಳೆ ಸಾಮಾನ್ಯವಾಗಿ ಚಿತ್ರದುರ್ಗ, ದಾವಣಗೆರೆ, ತುಮಕೂರು ಹೀಗೆ ದಕ್ಷಿಣಕರ್ನಾಟಕದ ಜಿಲ್ಲೆಗಳಲ್ಲಿ ಬೆಳೆಯುವುದು ಹೆಚ್ಚು. ಆದರೆ, ರೈತ ದಾವಲ್‍ಸಾಬ್, ಕೊಪ್ಪಳ ಜಿಲ್ಲೆಯಂತಹ ಬಿಸಿಲಿನ ನಾಡಿನಲ್ಲಿಯೂ ಈ ಹೂವನ್ನು ಬೆಳೆದು, ಯಶಸ್ವಿಯಾಗಬಹುದು ಎಂಬುದನ್ನು ಸಾಬೀತುಪಡಿಸಿದ್ದಾರೆ.
ಕಳೆದ ವರ್ಷ ಕೇವಲ ಅರ್ಧ ಎಕರೆಯಲ್ಲಿ ಶೃಂಗಾರ ತಳಿಯ ಸುಗಂಧರಾಜ ಬೆಳೆಯ ಗೆಡ್ಡೆಯನ್ನು ಭೂಮಿಗೆ ಬಿತ್ತಿದ ದಾವಲಸಾಬ, ಸತತ ಎಂಟು ತಿಂಗಳ ಕಾಲ ತಾಳ್ಮೆಯಿಂದ ಕಾಯ್ದು, ಇದೀಗ ನಿತ್ಯ ಉತ್ತಮ ಲಾಭ ಗಳಿಸುತ್ತಿದ್ದಾರೆ. ಇದೀಗ ನಿತ್ಯ ಕನಿಷ್ಟ 15 ರಿಂದ 20 ಕೆ.ಜಿ. ಹೂ ಪಡೆಯುತ್ತಿದ್ದು, ಕೊಪ್ಪಳದ ಮಾರುಕಟ್ಟೆಗೆ ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಹೂವಿಗೆ 50 ರಿಂದ 60 ರೂ. ದರ ಸಿಗುತ್ತಿದ್ದು, ನಿತ್ಯ ಕನಿಷ್ಟ ಎಂಟು ನೂರು ಗಳಿಂದ ಒಂದು ಸಾವಿರ ರೂ. ಆದಾಯ ಪಡೆಯುತ್ತಿದ್ದಾರೆ. ಶ್ರಾವಣ ಮಾಸದಲ್ಲಿ, ಹಬ್ಬ ಹರಿದಿನಗಳಲ್ಲಿ, ಅಮವಾಸ್ಯೆ, ಹುಣ್ಣಿಮೆಯ ಹಿಂದಿನ ದಿನದಲ್ಲಿ ಪ್ರತಿ ಕೆ.ಜಿ. ಗೆ ಗರಿಷ್ಠ 150 ರೂ. ವರೆಗೂ ಲಭ್ಯವಾಗುತ್ತದೆ. ಖರ್ಚು ವೆಚ್ಚ ಹೊರತುಪಡಿಸಿ ಅರ್ಧ ಎಕರೆಯಲ್ಲಿ, ವರ್ಷಕ್ಕೆ ಕನಿಷ್ಟ 2 ರಿಂದ 2.5 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಸುಗುಂಧರಾಜ ಹೂವಿನ ವಿಶೇಷತೆ ಎಂದರೆ, ಹೂವನ್ನು ಬಿಡಿಸಿದ ನಂತರವೂ, ಕನಿಷ್ಟ 03 ದಿನಗಳ ಕಾಲ ಬಾಡದೆ ಸುಗಂಧವನ್ನು ಸೂಸುತ್ತ ನಳನಳಿಸುತ್ತಿರುತ್ತದೆ.
ಪದವಿ ವ್ಯಾಸಂಗ ಪೂರ್ಣಗೊಂಡ ನಂತರ, ಸರ್ಕಾರಿ ಅಥವಾ ಖಾಸಗಿ ನೌಕರಿ ಮಾಡಬೇಕೋ, ಅಥವಾ ಸ್ವಯಂ ಉದ್ಯೋಗ ಮಾಡಬೇಕೊ ಎಂಬ ಜಿಜ್ಞಾಸೆಯಲ್ಲಿದ್ದ ತಾನು, ತೋಟಗಾರಿಕೆ ಇಲಾಖೆಯವರಿಂದ ಸಲಹೆ ಪಡೆದು, ಪುಷ್ಪಕೃಷಿಯಲ್ಲಿ ವಿಶೇಷವಾಗಿ ಸುಗಂಧರಾಜ ಬೆಳೆ ಬೆಳೆದು, ನಿತ್ಯ ಆದಾಯವನ್ನು ಗಳಿಸುತ್ತಾ ನೆಮ್ಮ ಕುಟುಂಬ ನೆಮ್ಮದಿಯ ಬದುಕು ಕಂಡುಕೊಂಡಿದ್ದೇನೆ. ರೈತರು ಎಂತಹ ಪರಿಸ್ಥಿತಿಯಲ್ಲೂ ಆತ್ಮ ಸ್ಥೈರ್ಯ ಕಳೆದುಕೊಳ್ಳದೇ ಇಲಾಖೆ ಯೋಜನೆಗಳ ಸದ್ಬಳಕೆ ಮಾಡಿಕೊಂಡು ಸ್ವಾವಲಂಬನೆ ಬದುಕು ರೂಪಿಸಿಕೊಳ್ಳಬೇಕು ಎನ್ನುತ್ತಾರೆ ರೈತ ದಾವಲಸಾಬ್ ಅವರು.
ಸುಗಂಧರಾಜ ಪುಷ್ಪ ಕೃಷಿ ಅತ್ಯಂತ ಕಡಿಮೆ ವೆಚ್ಚದಾಯಕವಾಗಿದ್ದು, ಅರ್ಧ ಎಕರೆಗೆ ಕೇವಲ 20 ರಿಂದ 30 ಸಾವಿರ ರೂ. ವೆಚ್ಚವಾಗಿದೆ. ಈ ಗಿಡಕ್ಕೆ ಕೀಟಬಾಧೆ, ರೋಗಬಾಧೆ ಕಾಡುವುದು ಬಹಳಷ್ಟು ಕಡಿಮೆ ಇರುವುದರಿಂದ, ಕೀಟನಾಶಕ ಬಳಕೆ, ಹೆಚ್ಚಿನ ಗೊಬ್ಬರ ಹಾಕುವ ಪ್ರಮೇಯವೂ ಇಲ್ಲ. ಸುಗಂಧರಾಜ ಗಡ್ಡೆಯನ್ನು ಒಮ್ಮೆ ಹೊಲಕ್ಕೆ ಹಾಕಿ, ಉತ್ತಮ ನಿರ್ವಹಣೆ ಮಾಡಿದರೆ, ಕನಿಷ್ಟ 03 ರಿಂದ 05 ವರ್ಷಗಳವರೆಗೆ ಯಾವುದೂ ಹೆಚ್ಚಿನ ಖರ್ಚಿಲ್ಲದೆ, ನಿರಂತರ ಹೂವಿನ ಬೆಳೆ ಪಡೆಯಬಹುದು ಎನ್ನುತ್ತಾರೆ ಕೊಪ್ಪಳದ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರದ ವಿಷಯ ತಜ್ಞ ವಾಮನಮೂರ್ತಿ ಅವರು.
ತೋಟಗಾರಿಕೆ ಬೆಳೆ ವಿಸ್ತರಣೆ ಹಾಗು ರೈತರಿಗೆ ಉತ್ತೇಜನ ನೀಡುವ ಸಲುವಾಗಿ ಇಲಾಖೆಯಿಂದ ಹಲವು ಯೋಜನೆಗಳು ಇಲಾಖೆಯಲ್ಲಿ ಲಭ್ಯವಿದೆ. ತೊಟಗಾರಿಕೆ ಬೆಳೆಗೆ ಹನಿ ನೀರಾವರಿ ವ್ಯವಸ್ಥೆ ಅಳವಡಿಕೆ ಅತ್ಯಂತ ಉತ್ತಮ ವ್ಯವಸ್ಥೆಯಾಗಿದ್ದು, ಇದರಿಂದ ಮಿತ ನೀರಿನಲ್ಲಿ ಅಧಿಕ ಇಳುವರಿ ಹಾಗೂ ಲಾಭ ಪಡೆಯಲು ಸಾಧ್ಯವಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್‍ನಡಿ ಶೇ. 90 ರಷ್ಟು ಸಬ್ಸಿಡಿ ಇದೆ. ರೈತರು ಇದರ ಸದುಪಯೋಗ ಪಡೆದು, ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂಬುದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಅವರ ಸಲಹೆ. ಬೇಳೂರು ಗ್ರಾಮದ ಇನ್ನೋರ್ವ ರೈತ ಸಣ್ಣ ಮಲ್ಲಪ್ಪ ಅವರು ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದು ಹೀಗೆ. ಈ ವರ್ಷ ಕಷ್ಟಪಟ್ಟು ಈರುಳ್ಳಿ ಬೆಳೆ ಬೆಳೆದೆ, ಆದರೆ ಬೆಲೆ ಕುಸಿತದಿಂದ ತೀವ್ರ ನಷ್ಟವಾಗಿದೆ. ರೈತ ದಾವಲಸಾಬ್ ಸುಗಂಧರಾಜ ಪುಷ್ಪಕೃಷಿ ಮಾಡುತ್ತಿರುವುದನ್ನು ಗಮನಿಸಿದ್ದು, ಉತ್ತಮ ಆದಾಯ ಬರುತ್ತಿದೆ. ನಾನೂ ಸಹ ಪುಷ್ಪಕೃಷಿ ಮಾಡಲು ನಿರ್ಧರಿಸಿದ್ದೇನೆ’. ಸಣ್ಣ ರೈತರು ಸುಗಂಧರಾಜ, ಗುಲಾಬಿ, ಕನಕಾಂಬರ ನಂತಹ ಪುಷ್ಪ ಕೃಷಿ ಮಾಡಿದಲ್ಲಿ ಉತ್ತಮ ಲಾಭ ಪಡೆಯಲು ಸಾಧ್ಯವಿದೆ.
ಹೆಚ್ಚಿನ ಮಾಹಿತಿಗೆ ಕೊಪ್ಪಳದ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರದ ವಿಷಯ ತಜ್ಞ ವಾಮನಮೂರ್ತಿ- 9482672039 ಕ್ಕೆ ಸಂಪರ್ಕಿಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.