ಉಕ್ರೇನ್ ಮೇಲೆ ರಷ್ಯಾದ ದಾಳಿ ಮತ್ತಷ್ಟು ತೀವ್ರಗೊಳ್ಳುವ ಭೀತಿ, ತೈವಾನ್ ವಿವಾದ ಪಡೆದುಕೊಳ್ಳಬಹುದಾದ ತಿರುವಿನ ಬಗ್ಗೆ ಅಸ್ಪಷ್ಟತೆ, ಯೂರೋಪ್ನಲ್ಲಿನ ಇಂಧನ ಬಿಕ್ಕಟ್ಟು, ತೈಲೋತ್ಪಾದನೆ ಕಡಿಮೆ ಮಾಡುವುದಾಗಿ ಒಪೆಕ್ ದೇಶಗಳ ಘೋಷಣೆ ಸೇರಿದಂತೆ ಹಲವು ಕಾರಣಗಳಿಂದ ಭಾರತದ ಷೇರುಪೇಟೆಯಲ್ಲಿ ನಿರುತ್ಸಾಹ ಮೂಡಿದೆ. ಇಂದು ಷೇರುಪೇಟೆಯು ಕುಸಿತದೊಂದಿಗೆ ವಹಿವಾಟು ಅರಂಭಿಸಿತು. ಇದು BSE ಮತ್ತು NSE ಸತತ 3ನೇ ದಿನವೂ ಕುಸಿತವಾಗಿದೆ. ಚೀನಾದಲ್ಲಿ ಆರ್ಥಿಕ ಹಿಂಜರಿತದ ಭೀತಿ ಎದುರಾಗಿದ್ದರೆ, ಏಷ್ಯಾದ ಆರು ಪ್ರಮುಖ ಷೇರುಪೇಟೆಗಳಲ್ಲಿ ಸತತ ಆರನೇ ದಿನ ಕುಸಿತ ಮುಂದುವರಿದಿದೆ. ಭಾರತದಲ್ಲಿ ಕುಸಿತದೊಂದಿಗೆ ವಹಿವಾಟು ಆರಂಭವಾದರೂ, ಸ್ವಲ್ಪ ಕಾಲದಲ್ಲಿಯೇ ಎರಡೂ ಸೂಚ್ಯಂಕಗಳು ಚೇತರಿಸಿಕೊಂಡವು. ಆರಂಭಿಕ ವಹಿವಾಟಿನಲ್ಲಿ ಬಿಎಸ್ಐ ಸೆನ್ಸೆಕ್ಸ್ 361.86 ಅಂಶಗಳ ಕುಸಿತ ಕಂಡರೆ, ಎನ್ಎಸ್ಇ 114.70 ಅಂಶಗಳ ಕುಸಿತ ದಾಖಲಿಸಿತ್ತು. ನಿನ್ನೆ ವಹಿವಾಟು ಕೊನೆಗೊಂಡಿದ್ದಕ್ಕೆ ಹೋಲಿಸಿದರೆ ಬಿಎಸ್ಇ ಮುನ್ನಡೆ ದಾಖಲಿಸಿದವು. ಸೆನ್ಸೆಕ್ಸ್ ಮತ್ತೆ 60,000 ಅಂಶಗಳ ಸಮೀಪಕ್ಕೆ ಮುನ್ನುಗ್ಗುತ್ತಿದೆ.