ದೇಶಿಯ ಮಾರುಕಟ್ಟೆಯಲ್ಲಿ ಸ್ಕೂಟರ್ ತಯಾರಿಕೆಯಲ್ಲಿಯೇ ಹೆಸರುವಾಸಿಯಾಗಿರುವ ಹೊಂಡಾ ಸಂಸ್ಥೆ ತನ್ನ ನೂತನ ಮಾದರಿಯ ಆಕ್ಟಿವಾ 5G ಆವೃತ್ತಿಯನ್ನು ದೆಹಲಿಯಲ್ಲಿ ನೆಡೆದ 2018ರ ಆಟೋ ಎಕ್ಸ್‌ಫೋದಲ್ಲಿ ಬಿಡುಗಡೆ ಮಾಡಿದೆ.
ಈಗಾಗಲೇ ಹಳೆಯ ಆವೃತ್ತಿಯಾದ ಆಕ್ಟಿವಾ 4G ಗ್ರಾಹಕರ ಮನ ಗೆದ್ದಿದ್ದು ಹೊಸ ಪೀಳಿಗೆಯನ್ನು ಗಮನದಲ್ಲಿರಿಸಿಕೊಂಡು ತಯಾರಿಸಿರುವ ಈ ಸ್ಕೂಟರ್ ವಿನೂತನ ಬಣ್ಣ ಮತ್ತು ವಿನ್ಯಾಸಗಳಿಂದ ಗ್ರಾಹಕರನ್ನು ತನ್ನತ್ತ ಸೆಳೆಯಲು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಸ್ಕೂಟರ್ ಮಾರಾಟದಲ್ಲಿ ಪ್ರಾಬಲ್ಯ ಸಾಧಿಸಿರುವ ಹೊಂಡಾ ಆಕ್ಟಿವಾ ಇದೀಗ ಹೊಸ ಮಾದರಿಯ ಆಕ್ಟಿವಾ 5G ಬಿಡುಗಡೆ ಮಾಡಿದ್ದು, ಹಳೆಯ 4G ಮಾದರಿಗೆ ಹೋಲಿಸಿದಲ್ಲಿ ಸಾಕಷ್ಟು ರೂಪಾಂತರಗಳನ್ನು ನಾವು ಕಾಣಬಹುದಾಗಿದೆ. ವಿವಿಧ ರೀತಿಯ ಆಕರ್ಷಕ ಬಣ್ಣ ಮತ್ತು ಹೊಸ ಬಗೆಯ ತಂತ್ರಜ್ಞಾನದಿಂದ ಗ್ರಾಹಕರ ಕೈ ಸೇರಲು ಈ ಆಕ್ಟಿವಾ 5G ಸಿದ್ಧವಾಗಿದೆ.
ಹೊಸ ಬಗೆಯ ಆಕ್ಟಿವಾ 5G ನಲ್ಲಿ ಬಣ್ಣಗಳಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಪೂಲ್ ಎಚ್‌ಡಿ ಲೈಟ್‌ಗಳು ಗಮನ ಸೆಳೆಯುತ್ತವೆ. ಅಷ್ಟೇ ಅಲ್ಲ 4G ಆವೃತ್ತಿಯಲ್ಲಿ ಬಳಸಲಾದ 109.19 ಸಿಸಿ ಎಂಜಿನ್ ಅನ್ನು ಹೊಸ ಆವೃತ್ತಿಯಲ್ಲೂ ಬಳಸಿದ್ದು, ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದು 8bhp @ 7,500rpm ಮತ್ತು 9Nm ಟಾರ್ಕ್ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, CVT ಸ್ವಂಯಚಾಲಿತ ಗೇರ್‌ಬಾಕ್ಸ್ ಅನ್ನು ಹೊಂದಿದೆ. ಅಷ್ಟೇ ಅಲ್ಲದೇ 5.3 ಲೀಟರ್ ಇಂಧನ ಸಂಗ್ರಹಣ ಸಾಮರ್ಥ್ಯ ಹೊಂದಿರುವ ಟ್ಯಾಂಕ್ ಇದರಲ್ಲಿದ್ದು, ಡ್ರಮ್ ಮತ್ತು ಕೊಂಬಿ ಬ್ರೇಕ್ ಸಿಸ್ಟಂ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಹಳೆಯ ಆರು ಬಣ್ಣಗಳ ಜೊತೆಗೆ ಹೊಸದಾಗಿರುವ ಡ್ಯಾಜೆಲ್ ಎಲ್ಲೋ ಮೆಟಾಲಿಕ್ ಮತ್ತು ಪರ್ಲ್ ಸ್ಪಾರ್ಟನ್ ರೆಡ್‌ನಲ್ಲೂ ಈ ಸ್ಕೂಟರ್ ಅನ್ನು ನೀವು ಖರೀದಿಸಬಹುದಾಗಿದೆ.
ಬರೋಬ್ಬರಿ 108 ಕೆಜಿ ತೂಕವಿರುವ ಆಕ್ಟಿವಾ 5G ಹಿಂದಿನ ಮಾದರಿಯಾದ 4G ರೀತಿಯಲ್ಲೇ 1,761 ಎಂಎಂ ಉದ್ದ, 710 ಎಂಎಂ ಅಗಲ ಮತ್ತು 1,149 ಎಂಎಂ ಎತ್ತರವಾಗಿದೆ. ಇದು ಅಲಾಯ್ ಚಕ್ರಗಳನ್ನು ಹೊಂದಿದ್ದು, ಎರಡು ಟ್ಯೂಬ್‌ಲೆಸ್ ಟಾಯರ್‌ಗಳನ್ನು ಹೊಂದಿದೆ. ಮೊದಲ ಬಾರಿಗೆ 110 ಸಿಸಿ ಸ್ಕೂಟರ್ ಮಾದರಿಗಳಲ್ಲಿ ನ್ಯೂ ಕ್ರೋಮ್ ಫುಲ್ ಎಲ್ಇಡಿ ಹೆಡ್‌ಲೈಟ್ ನೀಡಲಾಗಿದ್ದು, ಡಿಜಿಟಲ್ ಅನ್‌ಲಾಗ್ ಇನ್ಟ್ರೂಮೆಂಟ್ ಕ್ಲಸ್ಟರ್, ಇಕೋ ಸ್ಪೀಡ್ ಮೀಟರ್ ಮತ್ತು, ಸರ್ವಿಸ್ ಡ್ಯೂ ಇಂಡಿಕೇಟರ್‌ಗಳನ್ನು ಸಹ ನಾವು ಇದರಲ್ಲಿ ಕಾಣಬಹುದಾಗಿದೆ.
ಹಳೆಯ ಮಾದರಿಗೆ ಹೋಲಿಸಿದರೆ ಇದರಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದ್ದು, ಲಾಕಿಂಗ್ ಸಿಸ್ಟಂಗಳನ್ನು ತೆರೆಯಲು ಒಂದೇ ಸ್ವೀಚ್ ಅನ್ನು ನೀಡಲಾಗಿದೆ. ಮೂಲಗಳ ಪ್ರಕಾರ ಈ ಸ್ಕೂಟರ್‌ನ ಎಕ್ಸ್‌ಶೋ ರೂಂ ಬೆಲೆಯು 53000 ರಿಂದ 55000 ವರೆಗೆ ಇರುವ ಸಾಧ್ಯತೆಗಳಿದ್ದು ಹೊಸದಾಗಿ ಬಿಡುಗಡೆಯಾಗಿರುವ ಈ ಆಕ್ಟಿವಾ 5G ಮಾರುಕಟ್ಟೆಯಲ್ಲಿ ಇಗಾಗಲೇ ಇರುವ ಸ್ಕೂಟರ್‌ಗಳಿಗೆ ಸೆಡ್ಡು ಹೊಡೆಯಲಿವೆ ಎಂಬ ಮಾತುಗಳು ಕೇಳಿಬರುತ್ತಿವೆ.
ಒಟ್ಟಿನಲ್ಲಿ ಮೈಲೇಜ್ ಹಾಗೂ ತನ್ನದೇ ಆದ ಕಾರ್ಯಕ್ಷಮತೆಯ ಮೂಲಕ ಹೆಸರುವಾಸಿಯಾಗಿರುವ ಆಕ್ಟಿವಾ ಸರಣಿಗಳು ತನ್ನದೇ ಆದ ಗ್ರಾಹಕ ವಲಯವನ್ನು ಹೊಂದಿದ್ದು ಸದ್ಯದಲ್ಲೇ ಗ್ರಾಹಕರ ಕೈ ಸೇರಲಿದೆ.