ಬೆಂಗಳೂರು: ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ವಿದೇಯಕ ವಿವಾದದ ಬೆನ್ನಲ್ಲೇ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ 14 ಗಂಟೆಗಳಿಗೆ ಕೆಲಸದ ಅವಧಿ ಹೆಚ್ಚಿಸುವ ಪ್ರಸ್ತಾಪವಿಟ್ಟಿದೆ. ಇದೀಗ ಉದ್ಯೋಗಿಗಳ ಆಕ್ರೋಶಕ್ಕೆ ಗುರಿಯಾಗಿದೆ.
ಈಗಾಗಲೇ ಐಟಿ ಉದ್ಯೋಗಿಗಳಿಗೆ 10 ಗಂಟೆಗಳ ಕಾಲ ಉದ್ಯೋಗದ ಅವಧಿ ಇತ್ತು. ಆದರೆ ಈಗ 14 ಗಂಟೆಗಳಿಗೆ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಇಡಲಾಗಿದೆ. ಈಗ ವಾರಕ್ಕೆ ಮೂರು ಶಿಫ್ಟ್ ಗಳಿದ್ದು ಇನ್ನು ಎರಡು ಶಿಫ್ಟ್ ಗಳಿಗೆ ಇಳಿಕೆ ಮಾಡಿ 70 ಗಂಟೆ ದುಡಿಯಬೇಕಾಗಬಹುದು.
ಈಗಾಗಲೇ ಐಟಿ ಸಂಸ್ಥೆಗಳ ಮಾಲಿಕರು ಸಿಎಂಗೆ ಪ್ರಸಾವನೆ ಸಲ್ಲಿಸಿದ್ದಾರೆ. ಸಿಎಂ ಕೂಡಾ ಇದನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ. ಒಂದು ವೇಳೆ ಸಿಎಂ ಒಪ್ಪಿಗೆ ಸೂಚಿಸಿದರೆ ಈ ನಿಯಮ ಜಾರಿಗೆ ಬರಲಿದೆ. ಆದರೆ ನೌಕರರು ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕೆಲಸದ ಒತ್ತಡದಿಂದಾಗಿ ನೌಕರರ ಆರೋಗ್ಯ ಹಾಳಾಗಿದೆ. ಇನ್ನೀಗ 14 ಗಂಟೆ ದುಡಿತ ಎಂದರೆ ಕತ್ತೆ ದುಡಿತವಾಗುತ್ತದೆ. ಇದು ನ್ಯಾಯಯುತವಲ್ಲ ಎಂಬ ಅಸಮಾಧಾನ ಕೇಳಿಬರುತ್ತಿದೆ.
ಇತ್ತೀಚೆಗೆ ಕರ್ನಾಟಕ ಸರ್ಕಾರ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ಎಂಬ ನಿಯಮ ಜಾರಿಗೆ ತರಲು ಹೊರಟಿತ್ತು. ಅದಕ್ಕೆ ಪ್ರತೀಕಾರವಾಗಿ ಐಟಿ ಕಂಪನಿಗಳು ಉದ್ಯೋಗಿಗಳ ಮೇಲೆ ಹೆಚ್ಚುವರಿ ಕೆಲಸದ ಅವಧಿಯ ಹೊರೆ ಹಾಕಲು ಹೊರಟಿದ್ದಾರಾ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.